- ರಾಘವೇಂದ್ರ ಭಟ್, ಬೆಂಗಳೂರು ಹಂತಹಂತವಾಗಿ ಲಾಕ್‌ಡೌನ್ ತೆರವುಗೊಳಿಸುವ ಇಂಗಿತವನ್ನು ರಾಜ್ಯ ಸರಕಾರ ಹೊಂದಿದೆ. ಆದರೆ ಏಪ್ರಿಲ್ ಅಂತ್ಯದವರೆಗೂ ಈಗಿರುವ ಪರಿಸ್ಥಿತಿ ಮುಂದುವರಿಸುವುದು ಕ್ಷೇಮ. ಇಲ್ಲವಾದರೆ ಇದುವರೆಗೆ ಮಾಡಿರುವ ಪ್ರಯತ್ನಗಳೆಲ್ಲವೂ ವ್ಯರ್ಥವಾಗುತ್ತದೆ ಎಂಬ ನಿಲುವನ್ನು ತಜ್ಞರ ಸಮಿತಿ ವ್ಯಕ್ತಪಡಿಸಿದೆ. ಲಾಕ್‌ಡೌನ್ ಕುರಿತು ಟಾಸ್ಕ್‌ಫೋರ್ಸ್‌ನಿಂದ ಅಭಿಪ್ರಾಯ ನೀಡುವಂತೆ ನಿಮ್ಹಾನ್ಸ್ ನಿರ್ದೇಶಕರಿಗೆ ಜವಾಬ್ದಾರಿ ನೀಡಲಾಗಿತ್ತು. ವೈದ್ಯ ಹಾಗೂ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಲಾಕ್‌ಡೌನ್ ಮುಂದುವರಿಕೆ ಸೂಕ್ತ. ಆದರೆ ಆರ್ಥಿಕತೆಗೆ ಸಂಬಂಧಪಟ್ಟಂತೆ ಆ ಕ್ಷೇತ್ರದ ತಜ್ಞರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳಿ ಎಂದು ಅವರು ಅಭಿಪ್ರಾಯ ನೀಡಿರುವುದಾಗಿ ಉನ್ನತ ಮೂಲಗಳಿಂದ 'ವಿಜಯ ಕರ್ನಾಟಕ'ಕ್ಕೆ ಮಾಹಿತಿ ಲಭ್ಯವಾಗಿದೆ. ರಾಜ್ಯದಲ್ಲಿ ನಿಯಂತ್ರಣ ಸಮರ್ಪಕವಾಗಿ ನಡೆದಿದೆ. ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಲೋಪವಾಗದಂತೆ ಟಾಸ್ಕ್‌ಫೋರ್ಸ್ ಕಾರ್ಯ ನಿರ್ವಹಿಸಿದೆ. ತಬ್ಲಿಘಿ ಜಮಾತ್ ಹಾಗೂ ನಂಜನಗೂಡು ಪ್ರಕರಣ ಹೊರತುಪಡಿಸಿದರೆ ಸಮುದಾಯ ಹಂತದಲ್ಲಿ ರೋಗ ಪ್ರಸರಣವಾಗದಂತೆ ನೋಡಿಕೊಳ್ಳಲಾಗಿದೆ. ತಬ್ಲಿಘಿ ಜಮಾತ್ ವಿಚಾರದಲ್ಲಿ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕದ ಬಗ್ಗೆ ಮಾತ್ರ ಇದುವರೆಗೆ ಪರಿಶೋಧನೆ ನಡೆದಿದ್ದು, ತೃತೀಯ ಹಂತದ ಪರಿಶೀಲನೆ ಅಗತ್ಯವಿದೆ. ಆ ಬಳಿಕ ಮಾತ್ರ ನಾವು ಸುರಕ್ಷಿತ ಎಂಬ ಭಾವನೆ ತಳೆಯುವುದಕ್ಕೆ ಸಾಧ್ಯವಾಗುತ್ತದೆ ಎಂದು ಟಾಸ್ಕ್‌ಪೋರ್ಸ್ ಅಭಿಪ್ರಾಯಪಟ್ಟಿದೆ.
from India & World News in Kannada | VK Polls https://ift.tt/2whellP