ಹೊಸದಿಲ್ಲಿ: ರೆಡ್ ಜೋನ್ಗಳಲ್ಲಿರುವ ಹಾಟ್ಸ್ಪಾಟ್ ಪ್ರದೇಶಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸುವ ಅವಶ್ಯಕತೆಯಿದೆ ಎಂದು ಪ್ರಧಾನಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿದ್ದಾರೆ. ಕೆಂಪು ವಲಯಗಳನ್ನು ಕಿತ್ತಳೆ ವಲಯಕ್ಕೆ ಮತ್ತು ನಂತರ ಹಸಿರು ವಲಯಗಳಾಗಿ ಪರಿವರ್ತಿಸುವತ್ತ ರಾಜ್ಯಗಳ ಕಾರ್ಯ ಇರಬೇಕು ಎಂದು ಪ್ರಧಾನಿ ಸಲಹೆ ನೀಡಿದ್ದಾರೆ. ದೇಶದಲ್ಲಿನ ಪರಿಸ್ಥಿತಿಯನ್ನು ಚರ್ಚಿಸಲು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆದ ವಿಡಿಯೋ ಕಾನ್ಫರೆನ್ಸ್ನಲ್ಲಿ ಪ್ರಧಾನಿ ಮೋದಿ ಈ ಮಾತುಗಳನ್ನಾಡಿದ್ದಾರೆ. ಮುಂದಿನ ದಿನಗಳಲ್ಲಿ ಮಾಸ್ಕ್ಗಳು ಹಾಗೂ ಮುಖದ ಕವರ್ಗಳು ಜೀವನದ ಭಾಗವಾಗುತ್ತವೆ ಎಂದು ಅವರು ಹೇಳಿದ್ದು, ಸೋಂಕು ಹೆಚ್ಚಿರುವ ಪ್ರದೇಶಗಳಲ್ಲಿ ಲಾಕ್ಡೌನ್ನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದಿದ್ದಾರೆ. ದೇಶ ಇಲ್ಲಿಯವರೆಗೂ ಎರಡು ಲಾಕ್ಡೌನ್ಗಳನ್ನು ಕಂಡಿದ್ದು, ಎರಡು ವಿಭಿನ್ನ ಅಂಶಗಳನ್ನು ಹೊಂದಿದ್ದವು. ನಾವು ಮುಂದಿನ ದಾರಿ ಬಗ್ಗೆ ಯೋಚಿಸಬೇಕಾಗಿದೆ. ತಜ್ಞರ ಪ್ರಕಾರ ಕೊರೊನಾ ವೈರಸ್ನ ಪ್ರಭಾವ ಮುಂದಿನ ತಿಂಗಳುಗಳಲ್ಲಿ ಕಾಣಲಿದೆ. ಆರ್ಥಿಕತೆಗೆ ಪ್ರಾಮುಖ್ಯತೆ ನೀಡುವುದರ ಜೊತೆಗೆ ಕೊರೊನಾ ವಿರುದ್ಧದ ಹೋರಾಟವನ್ನೂ ನಾವು ಮುಂದುವರೆಸಬೇಕಾಗಿದೆ ಎಂದು ಅವರು ಹೇಳಿದರು. ಕಳೆದ ಒಂದೂವರೆ ತಿಂಗಳಲ್ಲಿ ಸಾವಿರಾರು ಜೀವಗಳನ್ನು ಉಳಿಸುವಲ್ಲಿ ದೇಶ ಯಶಸ್ವಿಯಾಗಿದೆ. ಲಾಕ್ಡೌನ್ ಸಕಾರಾತ್ಮಕ ಫಲಿತಾಂಶ ನೀಡಿದೆ. ಭಾರತದ ಜನಸಂಖ್ಯೆ ಹಲವಾರು ದೇಶಗಳ ಒಟ್ಟು ಜನಸಂಖ್ಯೆಯಾಗುತ್ತದೆ. ಭಾರತ ಸೇರಿ ಹಲವು ದೇಶಗಳಲ್ಲಿನ ಪರಿಸ್ಥಿತಿ ಮಾರ್ಚ್ ಆರಂಭದಲ್ಲಿ ಬಹುತೇಕ ಒಂದೇ ಆಗಿತ್ತು. ಆದರೆ, ಸಮಯೋಚಿತ ಕ್ರಮಗಳಿಂದ ಭಾರತದಲ್ಲಿ ಅನೇಕ ಜನರ ಪ್ರಾಣ ಉಳಿದಿದೆ ಎಂದು ಮೋದಿ ಹೇಳಿದ್ದಾರೆ. ಇನ್ನು, ಗರಿಷ್ಠ ಜನರ ಜೀವ ಉಳಿಸಲು ಲಾಕ್ಡೌನ್ ಸಹಾಯ ಮಾಡಿದೆ ಎಂದು ಗೃಹ ಸಚಿವ ಅಮಿತ್ ಶಾ ಮೋದಿ ಮಾತನ್ನೇ ಪುನರುಚ್ಛರಿಸಿದರು. ಇದರ ಜೊತೆ ಮುಖ್ಯಮಂತ್ರಿಗಳು ಬಿಕ್ಕಟ್ಟಿನ ಅವಧಿಯಲ್ಲಿ ಪ್ರಧಾನ ಮಂತ್ರಿ ಅವರ ನಾಯಕತ್ವವನ್ನು ಶ್ಲಾಘಿಸಿದರು. ಕೊರೊನಾ ನಿಯಂತ್ರಣಕ್ಕೆ ಮೋದಿ ಕೈಗೊಂಡ ನಿರ್ಧಾರಗಳಿಗೆ ತಮ್ಮ ಸಹಮತವನ್ನು ಎಲ್ಲ ಮುಖ್ಯಮಂತ್ರಿಗಳು ವ್ಯಕ್ತಪಡಿಸಿದರು.
from India & World News in Kannada | VK Polls https://ift.tt/2W0nnwt