ಹೊಸದಿಲ್ಲಿ: ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ತಾವು ಈಗ ಕಾಫಿ ಕುಡಿಯೋದನ್ನೇ ಬಿಟ್ಟಿದ್ದು, ಕೇವಲ ಗ್ರೀನ್ ಟೀ ಮಾತ್ರ ತೆಗೆದುಕೊಳ್ಳುತ್ತಿರುವುದಾಗಿ ದಿನೇಶ್ ಕಾರ್ತಿಕ್ ಜೊತೆಗಿನ ಇನ್ಸ್ಟಾಗ್ರಾಮ್ ಲೈವ್ ಚಾಟ್ನಲ್ಲಿ ತಮಾಷೆ ಮಾಡಿದ್ದಾರೆ. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಭಾರಿ ಸದ್ದು ಮಾಡಿದ ವಿವಾದಗಳಲ್ಲಿ ಟೀಮ್ ಇಂಡಿಯಾದ ಯುವ ಆಟಗಾರರಾದ ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ಅವರನ್ನು ಒಳಗೊಂಡ 2018ರ ಕಾಫಿ ವಿತ್ ಕರಣ್ ಕಾರ್ಯಕ್ರಮವು ಒಂದು. ಬಾಲಿವುಡ್ನ ಹೆಸರಾಂತ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಟ್ಟ ಟೆಲಿವಿಷನ್ ಕಾರ್ಯಕ್ರಮದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ಮಹಿಳೆಯರ ಬಗ್ಗೆ ಅಸಭ್ಯವಾಗಿ ಮಾತನಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಇದೇ ಕಾರಣಕ್ಕೆ ಭಾರತ ತಂಡದಿಂದ ಹಲವು ಪಂದ್ಯಗಳ ನಿಷೇಧ ಶಿಕ್ಷೆಗೂ ಗುರಿಯಾಗಿದ್ದರು. ತದ ನಂತರ ತಮ್ಮ ಹೇಳಿಕೆಗೆ ಸಾರ್ವಜನಿಕವಾಗಿ ಬೇಷರತ್ ಕ್ಷಮೆಯನ್ನೂ ಕೋರಿದ್ದರು. "ನಾನೀಗ ಕಾಫಿ ಸೇವಿಸುವುದಿಲ್ಲ. ಬದಲಿಗೆ ಗ್ರೀನ್ ಟೀ ಕುಡಿಯುತ್ತೇನೆ. ನಾನು ಕಾಫಿ ಕುಡಿದದ್ದು ಒಮ್ಮೆಯಷ್ಟೆ. ಅದು ನನ್ನ ಪಾಲಿಗೆ ಬಹಳ ದುಬಾರಿ ಸಾಬೀತಾಗಿತ್ತು. ಅದು ನನ್ನ ಜೀವನದ ಅತ್ಯಂತ ದುಬಾರಿ ಕಾಫಿ. ಅಂದಿನಿಂದ ಇಂದಿನವರೆಗೆ ಕಾಫಿಯಿಂದ ದೂರವೇ ಉಳಿದಿದ್ದೇನೆ," ಎಂದು ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಲ್ರೌಂಡರ್ ಹೇಳಿದ್ದಾರೆ. ಇದೇ ವೇಳೆ ಐಪಿಎಲ್ 2020 ಟೂರ್ನಿಯನ್ನು ಮುಚ್ಚಿದ ಕ್ರೀಡಾಂಗಣದಲ್ಲಿ ಆಯೋಜಿಸಿದರೆ ಒಳಿತು ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ. ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮಾರ್ಚ್ 29ಕ್ಕೆ ಶುರುವಾಗಬೇಕಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 13ನೇ ಆವೃತ್ತಿಯನ್ನು ಮುಂದಿನ ಆದೇಶದ ವರೆಗೆ ರದ್ದು ಪಡಿಸಲಾಗಿದೆ. ಮೇ.3ರವರೆಗೆ ಭಾರದಲ್ಲಿ ಲಾಕ್ಡೌನ್ ಹೇರಲಾಗಿದ್ದು, ಬಳಿಕ ಬಿಸಿಸಿಐ ಟೂರ್ನಿ ಆಯೋಜನೆಯ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದೆ. ಇನ್ನು ಬೆನ್ನು ನೋವಿನ ಸಮಸ್ಯೆಗೆ 6 ತಿಂಗಳ ವಿಶ್ರಾಂತಿ ನಂತರ ಮಾರ್ಚ್ನಲ್ಲಿ ರದ್ದಾದ ದಕ್ಷಿಣ ಆಫ್ರಿಕಾ ವಿರುದ್ಧದ ಸೀಮಿತ ಓವರ್ಗಳ ಕ್ರಿಕೆಟ್ ಸರಣಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ಹಾರ್ದಿಕ್ ಪಾಂಡ್ಯ, ಭರ್ಜರಿ ಕಮ್ಬ್ಯಾಕ್ ಮಾಡುವುದನ್ನು ಎದುರು ನೋಡುತ್ತಿದ್ದರು. ಆದರೆ ಕೋವಿಡ್-19 ಸೋಂಕು ಪಾಂಡ್ಯ ಲೆಕ್ಕಾಚಾರಗಳಿಗೆ ತಣ್ಣೀರೆರಚಿತ್ತು. "ಪ್ರೇಕ್ಷಕರು ಇಲ್ಲದೇ ಆಡುವುದು ವಿಭಿನ್ನ ಅನುಭವ ನೀಡಲಿದೆ. ಪ್ರೇಕ್ಷಕರ ಎದುರು ಸ್ಪರ್ಧಾತ್ಮಕವಾಗಿ ಆಡುವುದೇ ನಮ್ಮೆಲ್ಲರಿಗೂ ರೂಢಿ. ಆದರೆ ರಣಜಿ ಟ್ರೋಫಿಯಲ್ಲಿ ಪ್ರೇಕ್ಷಕರಿಲ್ಲದೆ ಆಡಿದ್ದೇನೆ. ನಿಜ ಹೇಳುವುದಾದರೆ ಈ ಬಾರಿ ಐಪಿಎಲ್ ಟೂರ್ನಿಯನ್ನು ಮುಚ್ಚಿದ ಕ್ರೀಡಾಂಗಣದಲ್ಲಿ ಆಯೋಜಿಸಿದರೆ ಒಳಿತು. ಕನಿಷ್ಠ ಜನರಿಗೆ ಮನೆಯಲ್ಲೇ ಕುಳಿತು ಮನೋರಂಜನೆ ಪಡೆಯುವುದು ಸಾಧ್ಯವಾಗುತ್ತದೆ," ಎಂದು ದಿನೇಶ್ ಕಾರ್ತಿಕ್ ಜೊತೆಗೆಗಿನ ಲೈವ್ ಚಾಟ್ನಲ್ಲಿ ಹೇಳಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3cMZbnZ