ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಏರಿಕೆಯಾಗುತ್ತಿದ್ದರೂ ಜನರ ಭಯ ಕಡಿಮೆಯಾದಂತಿದೆ. ಲಾಕ್‌ಡೌನ್ ಜಾರಿಯಲ್ಲಿದ್ದರೂ ಜನರು ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಿದ್ದಾರೆ. ಅದರಲ್ಲೂ ಭಾನುವಾರ ಆಗಿರುವುದರಿಂದ ತರಕಾರಿ, ಮೀನು, ಮಾಂಸ ಖರೀದಿ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಮಾರ್ಕೆಟ್‌ಗಳಲ್ಲಿ ಜನರ ಓಡಾಡುತ್ತಿದ್ದಾರೆ. ಬೆಂಗಳೂರಿನ ಯಶವಂತಪುರ ಮಾರ್ಕೆಟ್‌ನಲ್ಲಿ ಹಣ್ಣು, ತರಕಾರಿ, ಮೀನು, ಮಾಂಸ ಖರೀದಿ ಮಾಡಲು ಜನರು ಭಾರೀ ಸಂಖ್ಯೆಯಲ್ಲಿ ಸೇರಿದ್ದಾರೆ. ಆದರೆ ಯಾವುದೇ ರೀತಿಯ ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿಲ್ಲ. ಲಾಕ್‌ಡೌನ್ ತಕ್ಕಮಟ್ಟಿಗೆ ಕೆಲವು ಕಡೆಗಳಲ್ಲಿ ಸಡಿಲಗೊಳಿಸಿದರೂ ಕಟ್ಟುನಿಟ್ಟಿನ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಸರ್ಕಾರ ಸೂಚನೆ ನೀಡಿದೆ. ಆದರೆ ಜನರು ಮಾತ್ರ ಇದನ್ನು ಪಾಲನೆ ಮಾಡುತ್ತಿಲ್ಲ. ಮಾಸ್ಕ್ ಧರಿಸದೇ, ಸಾಮಾಜಿಕ ಅಂತರವನ್ನೂ ಕಾಪಾಡಿಕೊಳ್ಳದೆ ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿಬೀಳುತ್ತಿದ್ದ ದೃಶ್ಯ ಯಶವಂತಪುರ ಮಾರ್ಕೆಟ್‌ನಲ್ಲಿ ಕಂಡುಬಂತು. ರಾಜ್ಯದಲ್ಲಿ ಸದ್ಯ ಕೊರೊನಾ ಸೋಂಕಿತರ ಸಂಖ್ಯೆ 500 ಕ್ಕೆ ಏರಿಕೆಯಾಗಿದೆ. ಶನಿವಾರ ಆರೋಗ್ಯ ಇಲಾಖೆ ಈ ಮಾಹಿತಿ ನೀಡಿದ್ದು ಇದರ ಪ್ರಮಾಣ ಮತ್ತಷ್ಟು ಏರಿಕೆಯಾಗಬಹುದು. ಆದರೆ ಜನರು ಮಾತ್ರ ಕೊರೊನಾ ಭಯವನ್ನು ಮರೆತಂತೆ ವರ್ತಿಸುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಅಪಾಯ ಸೃಷ್ಟಿಗೆ ಕಾರಣವಾಗಬಹುದು. ಹೊಂಗಸಂದ್ರದಲ್ಲಿ ಮನೆಗೆ ದಿನಸು ಪೂರೈಕೆ ಬೆಂಗಳೂರಿನ ಹೊಂಗಸಂದ್ರ ಪ್ರದೇಶದಲ್ಲಿ ಒಟ್ಟು 30 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶವನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಜನರು ಮನೆಯಿಂದ ಹೊರಬಾರದಂತೆ ಎಚ್ಚರಿಕೆ ವಹಿಸಲಾಗಿದೆ. ಜನರಿಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಮನೆಗೆ ತಲುಪಿಸಲಾಗುತ್ತಿದೆ. ಬಿಬಿಎಂಪಿಯಿಂದ ಈ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಈ ಪ್ರದೇಶದ ಸುತ್ತ ಪೊಲೀಸರನ್ನು ನಿಯೋಜಿಸಲಾಗಿದ್ದು ಜನರು ಕಟ್ಟಿನಿಟ್ಟಿನ ಲಾಕ್‌ಡೌನ್ ಪಾಲನೆ ಮಾಡುವಂತೆ ಸೂಚನೆ ನೀಡಲಾಗಿದೆ.
from India & World News in Kannada | VK Polls https://ift.tt/2W1UU9B