ಕೆ.ವಿ.ಎನ್. ಸ್ವಾಮಿ, ಹಿರಿಯ ಪತ್ರಕರ್ತರು “ಇವರಿಗೇನಾಗಿದೆ..? ಲಾಕ್ಡೌನ್ ಅಂದ್ರೆ ಗೊತ್ತೇನ್ರೀ ನಿಮಗೆ..? ಇವರಿಗೆ ಯಾವತ್ತು ಬುದ್ಧಿ ಬರುತ್ತೋ ರೀ..? ಅಲ್ರೀ ನೀವು ಸಾಯೋದಲ್ಲದೆ, ಬೇರೆಯವರನ್ನೂ ಅಪಾಯಕ್ಕೆ ದೂಡುತ್ತಿದ್ದೀರಾ..?” ಹೀಗೆ ಟಿವಿ ಪರದೆ ಮೇಲೆ ಜನಸಾಮಾನ್ಯರನ್ನು ಎಚ್ಚರಿಸುತ್ತಿದ್ದ ಪತ್ರಕರ್ತರೂ ಸಹ ಈಗ ಅಪಾಯ ತಂದುಕೊಂಡಿದ್ದಾರೆ. ದಿನದ 24 ಗಂಟೆ ಸುದ್ದಿ ಕೊಡುವ ಭರಾಟೆಯಲ್ಲಿ, ಅಪಾಯದ ಗಂಟೆಯ ಸದ್ದನ್ನು ಪತ್ರಕರ್ತರು ಕೇಳಿಸಿಕೊಳ್ಳುತ್ತಲೇ ಇಲ್ಲ. ಸದ್ಯ ಈಗ ಕನ್ನಡದ ಸುದ್ದಿವಾಹಿನಿಯೊಂದರ ಕ್ಯಾಮೆರಾಮನ್ಗೆ ಕೊರೊನಾ ತಗುಲಿದೆ. ಪರೀಕ್ಷೆಯಲ್ಲಿ ಪಾಸಿಟಿವ್ ಬರುತ್ತಲೇ ಇಡೀ ಪತ್ರಕರ್ತ ಸಮೂಹ ಬೆಚ್ಚಿ ಬಿದ್ದಿದೆ. ಬಹಳಷ್ಟು ಜನಗಳನ್ನು ಕ್ವಾರಂಟೈನಿಗೆ ಒಳಪಡಿಸಲಾಗಿದೆ. ಎಂದೂ ಕೇಳರಿಯದ ಸನ್ನಿವೇಶ ಸೃಷ್ಟಿಯಾಗಿದೆ. ನನಗೆ ನೆನಪಿದ್ದಂತೆ 2009 ರಲ್ಲಿ H1N1 ಸೋಂಕು ಮೊದಲ ಬಾರಿಗೆ ಭಾರತಕ್ಕೆ ಕಾಲಿಟ್ಟಾಗ ನಾವು ಸುದ್ದಿ ಮನೆಯಲ್ಲಿ ಕೂತು ಹೊರಗಡೆ ಹೋಗುವ ವರದಿಗಾರರು ಮತ್ತು ಕ್ಯಾಮೆರಾಮರಾಮನ್ಗಳಿಗೆ ಮುನ್ನೆಚ್ಚರಿಕೆ ಕೊಡುತ್ತಿದ್ದ ನೆನಪು ಇನ್ನೂ ಹಸಿರಾಗಿದೆ. H1N1 ಬಗ್ಗೆ ವರದಿ ಮಾಡಲು ಹೋಗುವವರು ಮಾಸ್ಕ್ ಧರಿಸಿಯೇ ಕೆಲಸ ನಿರ್ವಹಿಸಬೇಕೆಂಬ ಫರ್ಮಾನನ್ನು ಆಗ ಹೊರಡಿಸಲಾಗಿತ್ತು. ಆಗ ಭಾರತದಲ್ಲಿ H1N1ಗೆ ನೂರಾರು ಜನ ಬಲಿಯಾಗಿದ್ದರು. ಬೆಂಗಳೂರಿನಲ್ಲೂ ಒಬ್ಬರೋ ಇಬ್ಬರೋ ಪ್ರಾಣ ಕಳೆದುಕೊಂಡ ನೆನಪು. ಅದೂ ಕೂಡ ಸಾಂಕ್ರಾಮಿಕ ರೋಗವಾಗಿತ್ತು. H1N1 ಕೇಂದ್ರದಿಂದ ವರದಿ ಮಾಡಿದ್ದ ನಮ್ಮ ವಾಹಿನಿಯ ವರದಿಗಾರ್ತಿಗೆ ಜ್ವರ ಬಂದಿದೆ ಎಂಬ ಸುದ್ದಿ ಬಂದಾಗ ನಮ್ಮ ಎದೆ ಧಸಕ್ಕೆಂದಿತ್ತು. ಆದರೆ, ಆ ಜ್ವರಕ್ಕೂ ಈ ಸೋಂಕಿಗೂ ಸಂಬಂಧವಿಲ್ಲ ಎಂದಾಗ ಸಮಾಧಾನವಾಯ್ತು. ಅದು H1N1. ಆದರೆ ಇದು ಕೊರೊನಾ. ಇದು ಒಂದು ರೀತಿಯಲ್ಲಿ ಅಗೋಚರ ರಾಕ್ಷಸ. ಇಂಥ ಪರಿಸ್ಥಿತಿಯಲ್ಲಿ, ನಮ್ಮಲ್ಲೇ ಮೊದಲು, ನಮ್ಮಲ್ಲಿ ಮಾತ್ರ, ಎಂಬ ಚಪಲಕ್ಕೆ ಬಿದ್ದು, ಅಪಾಯ ತಂದುಕೊಳ್ಳುವುದು ತರವಲ್ಲ. ಸುದ್ದಿಮನೆಯಲ್ಲಿ ಇದ್ದುಕೊಂಡೇ Exclusive ಸುದ್ದಿಗಳನ್ನು ಕೊಡಬಹುದಾ ಎಂದು ಯೋಚಿಸಿ ಆದಷ್ಟು ಎಚ್ಚರ ವಹಿಸುವುದು ಸೂಕ್ತ ಎನ್ನುವುದು ನನ್ನ ಅನಿಸಿಕೆ.
from India & World News in Kannada | VK Polls https://ift.tt/3bGiH5B