ಹೊಸದಿಲ್ಲಿ: ಭಾರತದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕೋವಿಡ್-19ಗೆ ಬಲಿಯಾದವರ ಸಂಖ್ಯೆ ಸಾವಿರ ದಾಟಿದೆ. ಕಳೆದ 24 ಗಂಟೆಗಳಲ್ಲಿ 73 ಜನ ಕೊರೊನಾ ವೈರಸ್‌ನಿಂದ ಸಾವನ್ನಪ್ಪಿದ್ದು, ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ ಇಷ್ಟೊಂದು ಸಾವುಗಳು ಭಾರತದಲ್ಲಿ ಡೆಡ್ಲಿ ವೈರಸ್‌ನಿಂದ ಸಂಭವಿಸಿವೆ. ಈ ಮೂಲಕ ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 1,007ಕ್ಕೆ ಏರಿದೆ. ದೇಶದಲ್ಲಿ ಮೊದಲ ಕೊರೊನಾ ಸಾವು ಸಂಭವಿಸಿ 50 ದಿನಗಳ ನಂತರ ಸಾವಿನ ಸಂಖ್ಯೆ ಸಾವಿರದ ಗಡಿ ದಾಟಿದೆ. ಕಲಬುರಗಿಯಲ್ಲಿ ಮಾರ್ಚ್ 10ರಂದು ಕೊರೊನಾದಿಂದ ಮೊದಲ ಸಾವು ಸಂಭವಿಸಿತ್ತು. ಇನ್ನು, ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದ್ದು, ಇದುವರೆಗೂ 31332 ಕೊರೊನಾ ಪಾಸಿಟಿವ್ ಕೇಸ್‌ಗಳು ದೇಶದಲ್ಲಿ ಕಂಡುಬಂದಿವೆ. 7696 ಜನ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಗುಣಮುಖ ಪ್ರಮಾಣ 24.56ರಷ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಮಹಾರಾಷ್ಟ್ರ ಒಂದರಲ್ಲಿಯೇ ಕಳೆದ 24 ಗಂಟೆಗಳಲ್ಲಿ 31 ಕೊರೊನಾ ಸಾವುಗಳು ಸಂಭವಿಸಿದ್ದು, ಅಲ್ಲಿ ಸಾವಿನ ಸಂಖ್ಯೆ 400ರ ಸಮೀಪ ಇದೆ. ಮುಂಬೈ ನಗರ ಒಂದರಲ್ಲಿಯೇ 6,000 ಕ್ಕೂ ಹೆಚ್ಚು ಸೋಂಕಿತರಿರುವುದು ಉದ್ಧವ್ ಠಾಕ್ರೆ ನೇತೃತ್ವದ ಸರಕಾರದ ನಿದ್ದೆಗೆಡಿಸಿದೆ. ಇನ್ನು, ಕರ್ನಾಟಕದಲ್ಲಿ ಇದುವರೆಗೂ 19 ಜನ ಕೊರೊನಾ ಸಂಬಂಧಿತವಾಗಿ ಸಾವನ್ನಪ್ಪಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್, ದೇಶದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ದ್ವಿಗುಣವಾಗುವುದಕ್ಕೆ 10.9 ದಿನಗಳು ಬೇಕಾಗುತ್ತದೆ ಎಂದು ಹೇಳಿದ್ದಾರೆ. ದೇಶದ 300 ಜಿಲ್ಲೆಗಳು ಕೊರೊನಾ ಮುಕ್ತವಾಗಿವೆ ಎಂದು ಅವರು ಹೇಳಿದ್ದು, ರೆಡ್‌ಜೋನ್‌ಗಳಲ್ಲಿ ಮೇ 3ರ ನಂತರವೂ ಲಾಕ್‌ಡೌನ್ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ. ಯಾವ ರಾಜ್ಯದಲ್ಲಿ ಎಷ್ಟು ಸಾವು..?1. ಮಹಾರಾಷ್ಟ್ರ - 400 2. ಗುಜರಾತ್ - 181 3. ಮಧ್ಯಪ್ರದೇಶ - 120 4. ದೆಹಲಿ - 54 5. ರಾಜಸ್ಥಾನ - 51 6. ಉತ್ತರ ಪ್ರದೇಶ - 34 7. ಆಂಧ್ರ ಪ್ರದೇಶ - 31 8. ತೆಲಂಗಾಣ - 26 9. ತಮಿಳುನಾಡು -25 10. ಪಶ್ಚಿಮ ಬಂಗಾಳ - 22 11. ಕರ್ನಾಟಕ - 20
from India & World News in Kannada | VK Polls https://ift.tt/2YgFjWg