ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ನಿಯಂತ್ರಣದಲ್ಲಿದ್ದು, ವೈರಸ್ ಪರೀಕ್ಷಾ ಕಾರ್ಯವೂ ವೇಗ ಪಡೆದಿದೆ. ದೇಶದ ಒಟ್ಟು ಸರಾಸರಿಗಿಂತಲೂ ಹೆಚ್ಚಿನ ಕೊರೊನಾ ಪರೀಕ್ಷೆಗಳು ಕರ್ನಾಟಕದಲ್ಲಿ ಆಗಿದ್ದು, ಕೇರಳಕ್ಕೆ ಸಮನಾಗಿ ಪರೀಕ್ಷೆಗಳನ್ನು ರಾಜ್ಯ ನಡೆಸಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಪರೀಕ್ಷೆಯ ಜೊತೆ ಕೊರೊನಾ ಪಾಸಿಟಿವ್ ಪ್ರಕರಣಗಳಲ್ಲೂ ರಾಜ್ಯ ದೇಶದ ಸರಾಸರಿಗಿಂತ ಪ್ರಗತಿ ಕಂಡಿದೆ. ರಾಜ್ಯದ ಪ್ರತಿ 100 ಕೊರೊನಾ ಟೆಸ್ಟ್ಗಳಲ್ಲಿ 1ಕ್ಕಿಂತ ಕಡಿಮೆ ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡುಬರುತ್ತಿವೆ. ಇಡೀ ದೇಶದಲ್ಲಿ ಪ್ರತಿ 100 ಕೊರೊನಾ ಟೆಸ್ಟ್ಗಳಲ್ಲಿ 4 ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ. ಇದುವರೆಗೂ ರಾಜ್ಯದಲ್ಲಿ ಪತ್ತೆಯಾದ ಕೊರೊನಾ ಸೋಂಕಿತರ ಎಲ್ಲ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಗಳನ್ನು ಮಾಡಲಾಗಿದೆ. ಇದರ ಜೊತೆ 104 ಮತ್ತು 14410 ಸಹಾಯವಾಣಿಗೆ ಬಂದಿದ್ದ ಕರೆಗಳಲ್ಲಿ ಶಂಕಿತ ಪ್ರಕರಣಗಳನ್ನು ಕೂಡ ಸಂಪೂರ್ಣವಾಗಿ ಪರೀಕ್ಷೆ ನಡೆಸಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಮನೆ ಮನೆಗೆ ಭೇಟಿ ನೀಡಿ ಕುಟುಂಬಗಳ ಆರೋಗ್ಯ ಪರಿಸ್ಥಿತಿಯನ್ನು ಗುರುತಿಸುವ ಕೆಲಸವು ನಡೆಯುತ್ತಿದೆ. ಈ ಸಮೀಕ್ಷೆಯಲ್ಲಿ ಕಂಡುಬಂದ ಅನಾರೋಗ್ಯ ಕುಟುಂಬಗಳ ಮೇಲೆ ಆರೋಗ್ಯ ಇಲಾಖೆ ನಿರಂತರ ನಿಗಾವಹಿಸಿದೆ. ಅವುಗಳ ಜೊತೆ ಬೇರೆ ಮನೆಗಳ ಆರೋಗ್ಯ ಪರಿಸ್ಥಿತಿಯನ್ನು 15 ದಿನಕ್ಕೊಮ್ಮೆ ಟ್ರ್ಯಾಕ್ ಮಾಡಲಾಗುತ್ತಿದೆ. ಮನೆ ಮನೆಯ ಆರೋಗ್ಯ ಸ್ಥಿತಿಯ ಸಮೀಕೆ ಮೇ 3ರೊಳಗೆ ಮುಗಿಯುತ್ತದೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಇದರ ಹೊರತಾಗಿ ರಾಜ್ಯದಲ್ಲಿ ಇದುವರೆಗೂ 501 ಪ್ರಕರಣಗಳು ಕಂಡುಬಂದಿವೆ. ರಾಜ್ಯದಲ್ಲಿ 13 ಸರಕಾರಿ ಹಾಗೂ 5 ಖಾಸಗಿ ಪ್ರಯೋಗಾಲಯಗಳಲ್ಲಿ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ. ಇದರಲ್ಲಿ 177 ಜನ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, 18 ಜನ ಸಾವನ್ನಪ್ಪಿದ್ದಾರೆ.
from India & World News in Kannada | VK Polls https://ift.tt/2VAZCvQ