ಬೆಂಗಳೂರು: ಜಾನುವಾರುಗಳು ಸತ್ತಾಗ ಹತ್ತು ಸಾವಿರದವರೆಗೆ ಪರಿಹಾರ ನೀಡುವ 'ಅನುಗ್ರಹ' ಯೋಜನೆಯನ್ನು ಹಣದ ಕೊರತೆಯ ನೆಪಹೇಳಿ ನಿಲ್ಲಿಸಬಾರದು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ವಿರೋಧ ಪಕ್ಷದ ನಾಯಕ ಪತ್ರ ಬರೆದಿದ್ದಾರೆ. ಕುರಿ, ಮೇಕೆ, ಹಸು, ಎಮ್ಮೆ, ಎತ್ತು ಮುಂತಾದ ಜಾನುವಾರುಗಳು ಸತ್ತಾಗ ನಷ್ಟ ಪರಿಹಾರವಾಗಿ ಹತ್ತು ಸಾವಿರದ ವರೆಗೆ ನೀಡಿದ ಅನುಗ್ರಹ ಯೋಜನೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲಾಗಿತ್ತು. ಆದರೆ ಇದೀಗ ಹಣದ ಕೊರತೆ ಇದೆ ಎಂದು ಬಿಎಸ್ವೈ ಸರ್ಕಾರ ಈ ಯೋಜನೆಯನ್ನು ನಿಲ್ಲಿಸಲು ಹೊರಟಿದೆ. ಇದನ್ನು ವಿರೋಧ ಮಾಡಿದ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಅನುಗ್ರಹ ಯೋಜನೆಯನ್ನು ನಿಲ್ಲಿಸಕೂಡದು ಎಂದು ಪತ್ರದ ಮೂಲಕ ಒತ್ತಾಯಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಮೇಣಗುಡ್ಡದ ಬಳಿ ಕರಬೂಜ ಹಣ್ಣು ಹಾಗೂ ಬಳ್ಳಿಯನ್ನು ತಿಂದು ರಾಮಕೃಷ್ಣಪ್ಪ ಎಂಬ ಕುರಿಗಾರರಿಗೆ ಸೇರಿದ ಸುಮಾರು 60 ಕುರಿಗಳು ಹೊಟ್ಟೆ ಒಡೆದು ಸತ್ತಿರುವ ಪ್ರಕರಣನ್ನು ಪತ್ರದಲ್ಲಿ ಉಲ್ಲೇಖಿಸಿದ ಸಿದ್ದರಾಮಯ್ಯ, ಈ ರೀತಿಯ ಪ್ರಕರಣಗಳು ರಾಜ್ಯಾದ್ಯಂತ ಸಂಭವಿಸುತ್ತಿದೆ ಎಂದು ಸಿಎಂ ಗಮನಕ್ಕೆ ತಂದಿದ್ದಾರೆ. ಇದರಿಂದ ಪಶುಪಾಲಕರು ತೀವ್ರ ರೀತಿಯ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಅನುಗ್ರಹ ಯೋಜನೆ ಪಶುಪಾಲಕರಿಗೆ ಸಣ್ಣದೊಂದು ಭದ್ರತೆಯ ಭರವಸೆ ಇತ್ತು. ಈ ಯೋಜನೆಗೆ ನೂರಾರು ಕೋಟಿಯ ಅನುದಾನದ ಅಗತ್ಯ ಇರುವುದಿಲ್ಲ. ಹಾಗಾಗಿ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸಿ ಪಶುಪಾಲಕರ ವಿರೋಧಿ ನಿಲುವನ್ನು ಸರ್ಕಾರ ತೆಗೆದುಕೊಳ್ಳಬಾರದು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
from India & World News in Kannada | VK Polls https://ift.tt/2VM1phX