ಬೆಂಗಳೂರು: ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಜಾರಿಯಲ್ಲಿದ್ದ ಲಾಕ್ಡೌನ್ನ್ನು ರಾಜ್ಯ ಸರ್ಕಾರ ಸಡಿಲಿಕೆ ಮಾಡಲು ಆದೇಶ ಹೊರಡಿಸಿದೆ. ಹಸಿರು ವಲಯದಲ್ಲಿ ಬರುವ 13 ಜಿಲ್ಲೆಗಳಲ್ಲಿ ಲಾಕ್ಡೌನ್ನನ್ನು ಸಡಿಲಿಕೆ ಮಾಡಲಾಗಿದ್ದು ಕೈಗಾರಿಕೆ, ಸಣ್ಣ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಿದೆ. ಚಾಮರಾಜನಗರ, ಕೊಪ್ಪಳ, ಚಿಕ್ಕಮಗಳೂರು, ರಾಯಚೂರು, ಚಿತ್ರದುರ್ಗ, ರಾಮನಗರ, ಹಾಸನ, ಶಿವಮೊಗ್ಗ, ಹಾವೇರಿ, ಯಾದಗಿರಿ, ಕೋಲಾರ, ದಾವಣಗೆರೆ, ಉಡುಪಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಲಾಕ್ಡೌನ್ ಸಡಿಲಿಸಲಾಗಿದೆ. ಈ ಜಿಲ್ಲೆಗಳಲ್ಲಿ ಕೈಗಾರಿಕೆ ಕೆಲಸ ಕಾರ್ಯ ಆರಂಭಿಸಲು ಅವಕಾಶ ಕಲ್ಪಿಸಲಾಗಿದೆ. ಕೈಗಾರಿಕೆಗಳಲ್ಲಿ ಕೆಲಸ ಮಾಡುವವರು ಅಲ್ಲಿಯೇ ಉಳಿದುಕೊಳ್ಳಲು ವ್ಯವಸ್ಥೆ ಮಾಡಬೇಕು ಎಂದು ಸೂಚಿಸಲಾಗಿದೆ. ಜೊತೆಗೆ ವಸತಿ ಸಮುಚ್ಛಯಗಳಲ್ಲಿ ಸಣ್ಣ ಅಂಗಡಿಗಳನ್ನು ತೆರೆಯಲು ಕೂಡಾ ಅವಕಾಶ ನೀಡಲಾಗಿದೆ. ಅಲ್ಲದೆ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ ಯಾವುದೇ ಮಾಲ್ಗಳನ್ನು ತೆರೆಯಲು ಅವಕಾಶ ನೀಡಿಲ್ಲ. ಸರ್ಕಾರದ ಕೋವಿಡ್ -19 ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಆದೇಶದಲ್ಲಿ ಸೂಚನೆ ನೀಡಲಾಗಿದೆ. ಇನ್ನು ಕೆಂಪು ವಲಯ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳಾದ ಬೆಂಗಳೂರು ನಗರ, ಬೆಳಗಾವಿ, ಮೈಸೂರು, ವಿಜಯಪುರ, ಬಾಗಲಕೋಟೆ , ಕಲಬುರಗಿ, ಬೀದರ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಸರ್ಕಾರ ಹೊರಡಿಸಿದ ಈ ಮಾರ್ಗಸೂಚಿ ಕೇವಲ ಮೇ 3 ರ ವರೆಗೆ ಮಾತ್ರ ಜಾರಿಯಲ್ಲಿರುತ್ತದೆ.
from India & World News in Kannada | VK Polls https://ift.tt/2VKSywR