ರಾಯಚೂರು: ಕೊರೊನಾ ಪರಿಸ್ಥಿತಿ ನಿರ್ವಹಣೆಗೆ ಸಂಬಂಧಿಸಿದಂತೆ ಸಚಿವರಲ್ಲಿ ಯಾವುದೇ ಭಿನ್ನಾಭಿಪ್ರಯವಿಲ್ಲ. ಆಧಾರ ರಹಿತ ಆರೋಪಕ್ಕೆ ಯಾರೂ ತಲೆಕೆಡಿಸಿಕೊಳ್ಳಬೇಡಿ. ಸರಕಾರದಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ ಎಂದು ಆರೋಗ್ಯ ಸಚಿವ ಸ್ಪಷ್ಟನೆ ನೀಡಿದರು. ನಗರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಯಂತ್ರಣಕ್ಕೆ ಗಮನಕೊಡುತ್ತಿದೆ ವಿನಃ ಸಚಿವರಲ್ಲಿ ಭಿನ್ನಾಭಿಪ್ರಾಯ ಇದೆ ಎಂಬ ವಿಚಾರಕ್ಕಲ್ಲ. ಅಂತಹ ಯಾವುದೇ ಗೊಂದಲಗಳು ಇಲ್ಲ ಎಂದು ಹೇಳಿದರು. ಇನ್ನು, ರಾಜ್ಯಾದ್ಯಂತ ಕೋವಿಡ್-19 ಆಸ್ಪತ್ರೆ ಆರಂಭಿಸುವ ನಿರ್ಧಾರಕ್ಕೆ ಬದ್ಧವಾಗಿದ್ದು, ಶೀಘ್ರದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಕೊರೊನಾ ಆಸ್ಪತ್ರೆ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. ಹೋಂ ಕ್ವಾರಂಟೈನ್‌ನಲ್ಲಿರುವವರು ನಿಯಮ ಉಲ್ಲಂಘಿಸದೇ ಸಮಾಜದ ಹಿತ ಕಾಯುವ ಕೆಲಸ ಮಾಡಬೇಕು. ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ನೀಗಿಸಲು ನಿವೃತ್ತ ವೈದ್ಯರನ್ನು ಬಳಕೆ ಮಾಡಿಕೊಳ್ಳಬಹುದು. ರಾಜ್ಯದ ವಿವಿಧ ನಗರಕ್ಕೆ ಗುಳೆ ಹೋಗಿ ಅಲ್ಲಿಯೇ ಸಿಲುಕಿರುವವರನ್ನು ಅವರ ಊರುಗಳಿಗೆ ಕರೆತರುವ ಬಗ್ಗೆ ಈಗಾಗಲೇ ಸಿಎಂ ಜತೆ ಚರ್ಚಿಸಲಾಗಿದೆ. ಲಾಕ್ ಡೌನ್ ಹಿನ್ನೆಲೆ ಯಾರೂ ಹಸಿವಿನಿಂದ ಬಳಲು ಅವಕಾಶ ನೀಡದಂತೆ ಡಿಸಿಗೆ ಸೂಚಿಸಲಾಗಿದೆ ಎಂದು ಹೇಳಿದರು. ಕೊರೊನಾ ಸೋಂಕು ತಗುಲಿದ ಪ್ರದೇಶಕ್ಕೆ ಸರಕಾರ ಹೆಚ್ಚಿನ ಗಮನಹರಿಸಿ ಸೌಲಭ್ಯ ಒದಗಿಸುತ್ತಿದೆ. ಇನ್ನುಳಿದ ಪ್ರದೇಶಗಳಿಗೆ ಹಂತ ಹಂತವಾಗಿ ಸೌಲಭ್ಯ ಒದಗಿಸಲು ಸರಕಾರ ಬದ್ಧವಾಗಿದೆ ಎಂದರು. ಇನ್ನು, ಖಾಸಗಿ ಆಸ್ಪತ್ರೆಗಳನ್ನು ಬಂದ್ ಮಾಡದಂತೆ ಎಚ್ಚರಿಕೆಯನ್ನು ನೀಡಿದರು. ಬಂದ್ ಮಾಡುವ ಖಾಸಗಿ ಆಸ್ಪತ್ರೆಗಳ ಲೈಸೆನ್ಸ್ ರದ್ದು ಮಾಡುವಂತೆ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ಸಚಿವರು ನೀಡಿದರು. ತುಂಗಭದ್ರಾ ಜಲಾಶಯಕ್ಕೆ ಭದ್ರಾ ಜಲಾಶಯದಿಂದ ಮೂರು ಟಿಎಂಸಿ ನೀರನ್ನು ಬಿಡುಗಡೆ ಮಾಡಲಾಗಿದೆ. ಇನ್ನು, ಒಂದು ಟಿಎಂಸಿ ನೀರು ಬರಲಿದ್ದು, ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗಲ್ಲ. ಕೆಎಂಎಫ್ ವತಿಯಿಂದ ಹಾಲು ಪೂರೈಕೆ ಪ್ರಮಾಣ ಹೆಚ್ಚಿಸಬೇಕು. ಗ್ರಾಮೀಣ ಪ್ರದೇಶದವರಿಗೂ ಉಚಿತ ಹಾಲು ವಿತರಣೆ ಮಾಡಲು ಸರಕಾರ ಚಿಂತನೆ ನಡೆಸಿದೆ ಎಂದು ತಿಳಿಸಿದರು.
from India & World News in Kannada | VK Polls https://ift.tt/2V74JTj