ಹೊಸದಿಲ್ಲಿ: ದೇಶಾದ್ಯಂತ ಏಪ್ರಿಲ್ 14ರವರೆಗೆ ಲಾಕ್‌ಡೌನ್ ಘೋಷಿಸಲಾಗಿದೆ. ಅದರ ತೆರವಿಗೆ ಕೇಂದ್ರ ಸರಕಾರದಿಂದ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಆದರೂ ರೈಲ್ವೆ ಸೇವೆಗಳು ಏಪ್ರಿಲ್ 15ರಿಂದ ಆರಂಭವಾಗುವ ಸಾಧ್ಯತೆಗಳಿವೆಯೇ. ಈ ಬಗ್ಗೆ ರೈಲ್ವೆ ಇಲಾಖೆ ನೀಡಿರುವ ಪ್ರಕಟಣೆ ಈ ಮುನ್ಸೂಚನೆ ನೀಡುತ್ತದೆ. ಕೊರೊನಾ ಸೋಂಕು ಹರಡದಂತೆ ನಿಯಂತ್ರಿಸಲು ದೇಶಾದ್ಯಂತ ವಿದಿಸಲಾಗಿರುವ ಲಾಕ್‌ಡೌನ್ ತೆರವಿನ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲದಿದ್ದರೂ ಏಪ್ರಿಲ್ 15ರಿಂದ ಕೆಲಸಕ್ಕೆ ಹಾಜರಾಗುವಂತೆ ನೌಕರರಿಗೆ ರೈಲ್ವೆ ಇಲಾಖೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ. ಏಪ್ರಿಲ್ 15ರಿಂದ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಎಲ್ಲ ಲೈನ್‌ಮನ್‌ಗಳು, ಟಿಕೆಟ್ ಪರೀಕ್ಷಕರು, ಭದ್ರತಾ ಸಿಬ್ಬಂದಿ, ಚಾಲನಾ ಸಿಬ್ಬಂದಿ ಮತ್ತು ಸಿಗ್ನಲ್ ಸಿಬ್ಬಂದಿಗೆ ರೈಲ್ವೆ ಇಲಾಖೆ ಸೂಚನೆ ರವಾನಿಸಿದೆ ಎಂದು ಎಂದು ಮೂಲಗಳನ್ನು ಉಲ್ಲೇಖಿಸಿ ಖಾಸಗಿ ಸುದ್ದಿಸಂಸ್ಥೆ ವರದಿ ಮಾಡಿದೆ. ಲಾಕ್‌ಡೌನ್ ನಂತರದ ಕಾರ್ಯಾಚರಣೆ ಬಗ್ಗೆ ಈವರೆಗೆ ಯಾವುದೇ ರೀತಿಯ ತೀರ್ಮಾನಗಳನ್ನು ಕೈಗೊಂಡಿಲ್ಲ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ. ಏಪ್ರಿಲ್ 15ಕ್ಕೆ ನಿಗದಿಯಂತೆ ದೇಶಾದ್ಯಂತ ಇರುವ ನಿರ್ಬಂಧ ತೆರವಾಗುವ ಬಗ್ಗೆ ಈವರೆಗೆ ಕೇಂದ್ರ ಸರಕಾರಿದಿಂದಲೂ ಯಾವುದೇ ಸ್ಪಷ್ಟ ನಿಲುವು ವ್ಯಕ್ತವಾಗಿಲ್ಲ. ನಿರ್ಬಂಧಗಳನ್ನು ಹಂತಹಂತವಾಗಿ ಸಡಿಲಗೊಳಿಸುವ ಬಗ್ಗೆ ಖುದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಇಂಗಿತ ವ್ಯಕ್ತಪಡಿಸಿದ್ದಾರೆ.
from India & World News in Kannada | VK Polls https://ift.tt/2wd7Nop