ವೆಂ. ಸುನೀಲ್ ಕುಮಾರ್ : ಸಾಮೂಹಿಕ ವಿವಾಹದ ಮೂಲಕ ಸಪ್ತಪದಿ ತುಳಿದು ಮಾದರಿಯಾಗಲು ಮುಂದಾಗಿದ್ದ ನವಜೋಡಿಗಳಿಗೆ ಸರಕಾರದಿಂದ ದೊರೆಯಬೇಕಾಗಿದ್ದ ಸೌಲಭ್ಯಗಳನ್ನು ತಪ್ಪಿಸಿದೆ. ‘ಸಪ್ತಪದಿ’ ಕಾರ‍್ಯಕ್ರಮದಲ್ಲಿ ವಿವಾಹ ಆಗಬಯಸಿ ನೋಂದಣಿ ಮಾಡಿಕೊಂಡಿದ್ದ ಬಹುತೇಕ ಎಲ್ಲರೂ ವಿವಾಹವಾಗಿದ್ದಾರೆ. ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮುಜರಾಯಿ ಇಲಾಖೆಯಿಂದ ಪ್ರತಿವರ್ಷ ಆಸಕ್ತ ಜೋಡಿಗಳಿಗೆ ಸಾಮೂಹಿಕ ವಿವಾಹ ಏರ್ಪಡಿಸಲಾಗುತ್ತದೆ. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಎಲ್ಲ ಜಿಲ್ಲೆಗಳಲ್ಲಿ ವತಿಯಿಂದ ಸಾಮೂಹಿಕ ವಿವಾಹ ಆಯೋಜಿಸಲಾಗಿತ್ತು. ಅದರಂತೆ ಅರ್ಹ ಜೋಡಿಗಳ ಪಟ್ಟಿಯನ್ನು ಇಲಾಖೆ ಆಯ್ಕೆ ಮಾಡಿ ಪ್ರಕಟಿಸಿತ್ತು. ಸಪ್ತಪದಿ ಕಾರ್ಯಕ್ರಮಕ್ಕೆ ಆಯ್ಕೆಯಾದ ಜೋಡಿಯ ಮದುವೆ ಆಯಾ ಜಿಲ್ಲೆಗಳಲ್ಲಿನ ಪ್ರಮುಖ ಮುಜರಾಯಿ ದೇವಾಲಯಗಳಲ್ಲಿ ನೆರವೇರಬೇಕಾಗಿತ್ತು. ಆದರೆ, ಕೊರೊನಾ ಮುಂಜಾಗ್ರತಾ ಕ್ರಮವಾಗಿ ಲಾಕ್‌ಡೌನ್ ಜಾರಿಯಾದ ಪರಿಣಾಮ ವಿವಾಹ ಕಾರ್ಯಕ್ರಮ ಮುಂದೂಡಲಾಗಿತ್ತು. ಮದುವೆ ಮುಗಿದು ಹೋಗಿದೆ!: ಕೊರೊನಾ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆ ಅಧಿಕಾರಿಗಳು ಸಪ್ತಪದಿ ಕಾರ್ಯಕ್ರಮವನ್ನು ಮತ್ತೆ ಆಯೋಜನೆ ಮಾಡಲು ಮುಂದಾಗಿದ್ದಾರೆ. ಅದರಂತೆ ಈ ಹಿಂದೆ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಂಡ ಜೋಡಿಗಳನ್ನು ಸಂಪರ್ಕಿಸಿದಾಗ ಅವರು ಈಗಾಗಲೇ ಮದುವೆ ಮಾಡಿಕೊಂಡಿರುವುದು ಕಂಡುಬಂದಿದೆ. ಮದುವೆ ವಧು-ವರರು ಸಿದ್ಧತೆ ಮಾಡಿಕೊಂಡಿದ್ದರಿಂದ ಹಾಗೂ ಮದುವೆ ನಿಶ್ಚಯದ ಕುರಿತು ಸಂಬಂಧಿಕರಿಗೆ ಹೇಳಿದ್ದರಿಂದ ವಧು-ವರರು ಸರಳವಾಗಿ ದೇವಾಲಯ ಹಾಗೂ ಮನೆಗಳ ಮುಂದೆಯೇ ಮದುವೆ ಮಾಡಿಕೊಂಡಿದ್ದು, ಸಪ್ತಪದಿ ಕಾರ್ಯಕ್ರಮದಲ್ಲಿ ಸಿಗಬೇಕಾದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ನೋಂದಣಿದಾರರಿಗೆ ಸೌಲಭ್ಯ ಕೊಡಿ: ಮುಜರಾಯಿ ಇಲಾಖೆ ದಿನಾಂಕ ನಿಗದಿಗೊಳಿಸಿದ ಕಾರಣ ಸಂಬಂಧಿಕರಿಗೆ ಮದುವೆಯಾಗುವ ಬಗ್ಗೆ ಹೇಳಲಾಗಿತ್ತು. ಕೊರೊನಾದಿಂದ ಸರಕಾರವೇ ವಿವಾಹ ಕಾರ್ಯಕ್ರಮ ಮುಂದೂಡಿತ್ತು. ಅನಿವಾರ್ಯ ಕಾರಣಗಳಿಂದ ಮದುವೆ ಮಾಡಿಕೊಂಡಿದ್ದು, ಹಿಂದೆ ನೋಂದಣಿ ಮಾಡಿಕೊಂಡವರಿಗೆ ಸಪ್ತಪದಿ ಸೌಲಭ್ಯಗಳನ್ನು ಕಲ್ಪಿಸಬೇಕೆಂಬುದು ನವಜೋಡಿಗಳ ಒತ್ತಾಯವಾಗಿದೆ.
from India & World News in Kannada | VK Polls https://ift.tt/3hmISSw