ನಾಗರಾಜು ಅಶ್ವತ್ಥ್, ಬೆಂಗಳೂರು ಗ್ರಾಮಾಂತರ ಬೆಂಗಳೂರು ಗ್ರಾಮಾಂತರ: ರಾಜ್ಯದಲ್ಲಿ ಕೊರೊನಾ ಹೊಡೆತಕ್ಕೆ ನಲುಗಿದ ಬಹುತೇಕ ನೇಕಾರರ ಬದುಕಿಗೆ ಸರಕಾರದ 2 ಸಾವಿರ ರೂ. ನೆರವಾಗಿಲ್ಲ. ಸರಕಾರದ ಅಂಕಿಅಂಶಗಳ ಪ್ರಕಾರ 1.25ಲಕ್ಷ ರಾಜ್ಯದಲ್ಲಿದ್ದಾರೆ. ಈ ಪೈಕಿ ಕೇವಲ 55 ಸಾವಿರ ನೇಕಾರರ ಅರ್ಜಿಗಳನ್ನಷ್ಟೇ ಸಹಾಯಧನಕ್ಕೆ ಪರಿಗಣಿಸಲಾಗಿದ್ದು, ಅನೇಕರ ಖಾತೆಗಳಿಗೆ ಹಣ ತಲುಪಿಲ್ಲ. ಸರಕಾರ ನೀಡಿದ ಮಾನದಂಡಗಳು, ಕೊರೊನಾ ಸಂದಿಗ್ಧ ಸ್ಥಿತಿಯಲ್ಲಿ ಬ್ಯಾಂಕಿಂಗ್ ಆಧಾರ್ ಲಿಂಕಿಂಗ್ಗೆ ವ್ಯವಸ್ಥೆಯಿಲ್ಲದೆ ಬಹುತೇಕರು ಅರ್ಜಿಗಳನ್ನು ಸಲ್ಲಿಸಿಲ್ಲ. ಜೊತೆಗೆ ಪ್ರತಿಯೊಬ್ಬ ನೇಕಾರರಿಂದ 2 ಸೀರೆ ಖರೀದಿಸುವ ಭರವಸೆಯನ್ನೂ ಸರಕಾರ ಈಡೇರಿಸಿಲ್ಲ. ಹಾಗಾಗಿ ನೇಕಾರರನ್ನು ಅಸಂಘಟಿತ ವಲಯಕ್ಕೆ ಸೇರಿಸಬೇಕೆಂಬ ಒತ್ತಡ ಹೆಚ್ಚಾಗುತ್ತಿದೆ. ಪ್ರತಿವಾರ 2ರಿಂದ 5ಸಾವಿರ ಬಟವಾಡೆ(ವಾರದ ವೇತನ) ಪಡೆವ ನೇಕಾರರು ಲಾಕ್ಡೌನ್ ವೇಳೆ ಮತ್ತು ವರ್ಷಾಂತ್ಯದವರೆಗೆ ಯಾವುದೇ ಉದ್ಯೋಗವಿಲ್ಲದಂತಾಗಿದ್ದರು. ಕಚ್ಛಾ ಪದಾರ್ಥಗಳಿಲ್ಲದೆ, ದಾಸ್ತಾನಿನಲ್ಲಿ ಉಳಿದಿದ್ದ ಸೀರೆಗಳ ಮಾರಾಟವಿಲ್ಲದ ಹೊಸ ನೇಯ್ಗೆಗೆ ಅವಕಾಶಗಳಿಲ್ಲದೆ ಕುಳಿತಿದ್ದರು. 2020ರ ಜನವರಿ ತಿಂಗಳ ಕೊನೆಯಿಂದ ಡಿಸೆಂಬರ್ ಕೊನೆಯವರೆಗೂ ಯಾವುದೇ ಆದಾಯವಿಲ್ಲದೆ ಕುಳಿತಿದ್ದ ನೇಕಾರರಿಗೆ ಸರಕಾರದ 2 ಸಾವಿರ ಸಹಾಯಧನ ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಜತೆಗೆ, ಪ್ರತಿ ನೇಕಾರನಿಂದ 2 ಸೀರೆ ಖರೀದಿ ಮಾಡುವ ಭರವಸೆ ನೀಡಿ, ಮಾತು ತಪ್ಪಿದ ಸರಕಾರದ ನಡೆಗೆ ನೇಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ದೊಡ್ಡಬಳ್ಳಾಪುರ ನೇಕಾರ ಹೋರಾಟ ಸಮಿತಿ ಅಧ್ಯಕ್ಷ ಬಿಜೆ ಹೇಮಂತರಾಜು ತಿಳಿಸಿದ್ದಾರೆ. ರಾಜ್ಯ ಸರಕಾರ ನೇಕಾರರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಭಾವದಿಂದ ನೋಡುತ್ತಿದ್ದು, ಪ್ರಸ್ತುತ ರಾಜ್ಯ ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿ 32 ವಲಯಗಳಲ್ಲಿ ನೇಕಾರರನ್ನು ಸೇರ್ಪಡಿಸುವ ಬೇಡಿಕೆಯನ್ನು ನೇಕಾರರು ಮುಂದಿಟ್ಟಿದ್ದಾರೆ. ಇದರಿಂದ ನೇಕಾರರಿಗೆ ಅನೇಕ ಲಾಭಗಳಾಗಲಿವೆ ಎನ್ನುತ್ತಾರೆ ಉತ್ತರ ಕರ್ನಾಟಕ ನೇಕಾರ ಅಭಿವೃದ್ಧಿ ಸಮಿತಿಯ ರಾಜ್ಯ ಕಾರ್ಯದರ್ಶಿ ಪುರುಷೋತ್ತಮ ವಾಸುದೇವ್ ಢಗೆ ಅವರು. ಸಹಾಯಧನವನ್ನು ಸಮರ್ಪಕವಾಗಿ ನೀಡುವಲ್ಲಿ ಸರಕಾರ ವಿಫಲವಾಗಿದೆ. ಸೀರೆ ಖರೀದಿ ಭರವಸೆಯನ್ನೂ ಈಡೇರಿಸಿಲ್ಲ. ನಮ್ಮನ್ನು ಅಂಸಂಘಟಿತ ವಲಯಕ್ಕೆ ಸೇರಿಸಿ ಸೌಲಭ್ಯ ಒದಗಿಸಿ. ಎಂಡಿ ಲಕ್ಷ್ಮಿನಾರಾಯಣ್, ನೇಕಾರ ಮುಖಂಡ
from India & World News in Kannada | VK Polls https://ift.tt/3aRNSNC