ಚಿಕ್ಕಮಗಳೂರು: ಇವರು ನಿಮ್ಮ ತಾಯಿ , ತಂದೆ ಇವರೇ ಎಂದು ತೋರಿಸಿಕೊಟ್ಟರೆ ನಂಬುತ್ತಾರೆ. ಅದಕ್ಕೆ ಸಾಕ್ಷಿ ಕೊಡಿ ಎಂದು ಕೇಳಲು ಯಾರು ಹೋಗಲ್ಲ. ಆದರೆ ಕೆಲವರು ಸಾಕ್ಷಿ ಕೇಳುವ ಮನಸ್ಥಿತಿಯ ಜನರು ಇರ್ತಾರೆ. ಸಾಕ್ಷಿ ಕೇಳುವ ಮನಸ್ಥಿತಿ ಇದ್ದರೆ ಅದು ಅವರ ದೋಷ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವ್ಯಂಗ್ಯವಾಡಿದ್ದಾರೆ. ಚಿಕ್ಕಮಗಳೂರಿನಲ್ಲಿ ದತ್ತ ಮಲಾಧಾರಣೆ ಹಿನ್ನೆಲೆ ನಡೆದ ಭಿಕ್ಷಾಟನೆ ಬಳಿಕ ಮಾತನಾಡಿದ ಸಿಟಿ ರವಿ, ಹನುಮ ಹುಟ್ಟಿದ್ದು ಯಾವಾಗ ಗೊತ್ತಾ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಕೆಲವರಿಗೆ ಎಲ್ಲವನ್ನೂ ಅನುಮಾನಿಸುವ ಪ್ರವೃತ್ತಿ ಇರುತ್ತದೆ. ಸಿದ್ದರಾಮಯ್ಯ ಅವರಿಗೂ ಅಂತಹ ಕಾಯಿಲೆ ಇದ್ರೆ ಅದು ಅವರ ದೋಷ. ನಂಬಿಕೆ ಎಲ್ಲವನ್ನೂ ಮೀರಿದ್ದು. ನಂಬಿಕೆಗಳ ಮೇಲೆ ಜಗತ್ತು ಇರೋದು. ಕೆಲವರಿಗೆ ಭಗವಂತ ಕಾಣಲ್ಲ, ಕೆಲವರಿಗೆ ಎಲ್ಲ ಕಡೆ ಕಾಣುತ್ತಾನೆ. ನೋಡುವ ದೃಷ್ಟಿ ಇರೋರಿಗೆ ಭಗವಂತನನ್ನು ತೋರಿಸಬಹುದು. ನೋಡುವ ದೃಷ್ಟಿ ಇಲ್ಲದವರಿಗೆ ಎಲ್ಲಿ ನಿಂತರೂ ಭಗವಂತವ ಕಾಣಲ್ಲ ಎಂದು ಸಿದ್ದರಾಮಯ್ಯ ಕಾಲೆಳೆದಿದ್ದಾರೆ. ಸಿದ್ದರಾಮಯ್ಯ ಅವರಿಗೆ ಈ ಪ್ರವೃತ್ತಿ ಹುಟ್ಟಿನಿಂದ ಬಂದಿರುವುದಲ್ಲ ಸಹವಾಸ ದೋಷದಿಂದ ಬಂದಿರೋದು. ಅವರ ತಂದೆ-ತಾಯಿಗೆ ದೇವರ ಮೇಲೆ ಶ್ರದ್ಧೆ ಇರೋ ಕಾರಣಕ್ಕೆ ಅವರಿಗೆ ದೇವರ ಹೆಸರಿಟ್ಟಿದ್ದಾರೆ. ಸಹವಾಸ ದೋಷದಿಂದ ಅವರು ಕೆಟ್ಟಿದ್ದಾರೆ ಎಂದು ಸಿಟಿ ರವಿ ಕುಹಕವಾಡಿದ್ದಾರೆ. ಭಾನುವಾರ ತಮ್ಮ ಹುಟ್ಟೂರಿಗೆ ಸಿದ್ದರಾಮಯ್ಯ ತೆರಳಿದ್ದರು. ಈ ವೇಳೆ ಚಿಕನ್ ಊಟ ಸವಿಯುತ್ತಿದ್ದರು. ಆಗ ಅವರ ಅಭಿಮಾನಿಯೊಬ್ಬರು, ಅಣ್ಣಾ ಇವತ್ತು ಹನುಮ ಜಯಂತಿ ಇದೆ ಎಂದು ನೆನಪಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, ಹನುಮ ಹುಟ್ಟಿದ ದಿನಾಂಕ ನಿನಗೆ ಗೊತ್ತಾ. ಗೊತ್ತಿದ್ರೆ ಆಚರಿಸು. ಇಲ್ಲಾಂದ್ರೆ ಚಿಕನ್ ತಿನ್ನ ' ಎಂದು ಹೇಳಿದ್ದರು. ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
from India & World News in Kannada | VK Polls https://ift.tt/34R6tWq