ಬಾಕ್ಸಿಂಗ್‌ ಡೇ ಟೆಸ್ಟ್‌: 326ಕ್ಕೆ ಆಲೌಟಾದರೂ 131 ರನ್‌ ಮುನ್ನಡೆ ಗಳಿಸಿದ ಭಾರತ!

ಮೆಲ್ಬೋರ್ನ್‌: ಪಂದ್ಯದ ಎರಡನೇ ದಿನ ಪ್ರಾಬಲ್ಯ ಸಾಧಿಸಿದ್ದ ಭಾರತ ತಂಡ, ಮೂರನೇ ದಿನ ಮಿಚೆಲ್‌ ಸ್ಟಾರ್ಕ್‌ (78ಕ್ಕೆ 3) ಹಾಗೂ ನೇಥನ್‌ ಲಯಾನ್‌ (72ಕ್ಕೆ 3) ಅವರ ಶಿಸ್ತುಬದ್ಧ ದಾಳಿಗೆ ನಲುಗಿ ಬಾಕ್ಸಿಂಗ್ ಡೇ ಟೆಸ್ಟ್ ಪ್ರಥಮ ಇನಿಂಗ್ಸ್‌ನಲ್ಲಿ 326 ರನ್‌ಗಳಿಗ ಆಲೌಟ್‌ ಆಯಿತು. ಆದರೂ, ಅಜಿಂಕ್ಯ ರಹಾನೆ (112) ಶತಕ ಹಾಗೂ ರವೀಂದ್ರ ಜಡೇಜಾ(57) ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧ 131 ರನ್‌ ಮುನ್ನಡೆ ಗಳಿಸಿತು. ಸೋಮವಾರ ಬೆಳಗ್ಗೆ ಇಲ್ಲಿನ ಮೆಲ್ಬೋರ್ನ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ 82 ರನ್‌ಗಳ ಮುನ್ನಡೆಯೊಂದಿಗೆ ಭಾರತ ಪ್ರಥಮ ಇನಿಂಗ್ಸ್ ಮುಂದುವರಿಸಿತ್ತು. ಎರಡನೇ ದಿನವಾದ ಭಾನುವಾರ ಪ್ರಾಬಲ್ಯ ಮೆರೆದಿದ್ದ ನಾಯಕ ಅಜಿಂಕ್ಯ ರಹಾನೆ ಹಾಗೂ ಜೋಡಿ ಮೂರನೇ ದಿನ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. 223 ಎಸೆತಗಳಲ್ಲಿ 12 ಬೌಂಡರಿಯೊಂದಿಗೆ 112 ರನ್‌ ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದ ಅಜಿಂಕ್ಯ ರಹಾನೆ, 100ನೇ ಓವರ್‌ನಲ್ಲಿ ಅನಗತ್ಯ ರನ್‌ ಕದಿಯಲು ಹೋಗಿ ರನೌಟ್‌ ಆದರು. ಆ ಮೂಲಕ 121 ರನ್‌ಗಳ ಸುದೀರ್ಘ ಜತೆಯಾಟ ಅಂತ್ಯವಾಯಿತು. ರಹಾನೆ ನಿರ್ಗಮಿಸಿದ ಬೆನ್ನಲ್ಲೆ ರವೀಂದ್ರ ಜಡೇಜಾ ಅರ್ಧಶತಕ ಪೂರೈಸಿ ಎಂದಿನಂತೆ ತಮ್ಮ ಶೈಲಿಯಲ್ಲಿ ಬ್ಯಾಟ್‌ ತಿರುಗಿಸಿ ಸಂಭ್ರಮಿಸಿದರು. 159 ಎಸೆತಗಳನ್ನು ಎದುರಿಸಿದ ಅವರು ಮೂರು ಬೌಂಡರಿಯೊಂದಿಗೆ 57 ರನ್‌ ಗಳಿಸಿ ಮುನ್ನುಗ್ಗುತ್ತಿದ್ದ ವೇಳೆ ಮಿಚೆಲ್‌ ಸ್ಟಾರ್ಕ್‌ ಎಸೆತದಲ್ಲಿ ಪ್ಯಾಟ್‌ ಕಮಿನ್ಸ್‌ಗೆ ಕ್ಯಾಚ್‌ ನೀಡಿದರು. ರಹಾನೆ-ಜಡೇಜಾ ವಿಕೆಟ್‌ ಒಪ್ಪಿಸುತ್ತಿದ್ದಂತೆ ಉಮೇಶ್‌ ಯಾದವ್‌(9), ಆರ್ ಅಶ್ವಿನ್‌(14) ಹಾಗೂ ಜಸ್‌ಪ್ರಿತ್‌ ಬುಮ್ರಾ(0) ಬಹುಬೇಗ ಪೆವಿಲಿಯನ್‌ಗೆ ತೆರಳಿದರು. ಒಟ್ಟಾರೆ ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 326 ರನ್‌ ಗಳಿಸಿ, 131 ರನ್‌ ಮುನ್ನಡೆ ಸಾಧಿಸಿತು. ಆಸ್ಟ್ರೇಲಿಯಾ ಪರ ಉತ್ತಮ ಬೌಲಿಂಗ್‌ ಮಾಡಿದ ಮಿಚೆಲ್‌ ಸ್ಟಾರ್ಕ್‌ ಹಾಗೂ ಸ್ಪಿನ್ನರ್‌ ನೇಥನ್‌ ಲಯಾನ್‌ ತಲಾ ಮೂರು ವಿಕೆಟ್‌ಗಳನ್ನು ಪಡೆದರು. ಪ್ಯಾಟ್‌ ಕಮಿನ್ಸ್ ಎರಡು ವಿಕೆಟ್‌ ಹಾಗೂ ಜಾಶ್‌ ಹೇಝಲ್‌ವುಡ್‌ ಒಂದು ವಿಕೆಟ್‌ ಕಿತ್ತರು. ಇದಕ್ಕೂ ಮುನ್ನ ತಂಡ ಪ್ರಥಮ ಇನಿಂಗ್ಸ್‌ನಲ್ಲಿ ಜಸ್‌ಪ್ರಿತ್‌ ಬುಮ್ರಾ ಹಾಗೂ ಆರ್‌ ಅಶ್ವಿನ್‌ ಮಿಂಚಿನ ದಾಳಿಯಿಂದ 195 ರನ್‌ಗಳಿಗೆ ಮೊದಲ ದಿನವೇ ಆಲೌಟ್‌ ಆಗಿತ್ತು. ಆಸೀಸ್‌ ಪರ ಮಾರ್ನಸ್‌ ಲಾಬುಶೇನ್‌(48) ಗರಿಷ್ಠ ಸ್ಕೋರರ್‌ ಎನಿಸಿಕೊಂಡಿದ್ದರು. ಸಂಕ್ಷಿಪ್ತ ‌ (ಪ್ರಥಮ ಇನಿಂಗ್ಸ್) ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್‌ 72.3 ಓವರ್‌ಗಳಲ್ಲಿ 195 ಆಲ್‌ಔಟ್ (ಮ್ಯಾಥ್ಯೂ ವೇಡ್‌ 30, ಮಾರ್ನಸ್‌ ಲಾಬುಶೇನ್ 48, ಟ್ರಾವಿಸ್‌ ಹೆಡ್‌ 38, ನೇಥನ್ ಲಯಾನ್ 20; ಜಸ್‌ಪ್ರೀತ್‌ ಬುಮ್ರಾ 56ಕ್ಕೆ 4, ಆರ್‌ ಅಶ್ವಿನ್ 35ಕ್ಕೆ 3, ಮೊಹಮ್ಮದ್ ಸಿರಾಜ್ 40ಕ್ಕೆ 2). ಭಾರತ: ಮೊದಲ ಇನಿಂಗ್ಸ್‌ 115.1 ಓವರ್‌ಗಳಿಗೆ 326 ಆಲೌಟ್‌ (ಶುಭಮನ್ ಗಿಲ್ 45, ಚೇತೇಶ್ವರ್ ಪೂಜಾರ 17, ಅಜಿಂಕ್ಯ ರಹಾನೆ 112, ಹನುಮ ವಿಹಾರಿ 21, ರಿಷಭ್ ಪಂತ್ 29, ರವೀಂದ್ರ ಜಡೇಜಾ 57; ಮಿಚೆಲ್‌ ಸ್ಟಾರ್ಕ್ 78ಕ್ಕೆ 3, ಪ್ಯಾಟ್‌ ಕಮಿನ್ಸ್‌ 80ಕ್ಕೆ 2, ನೇಥನ್ ಲಯಾನ್ 72ಕ್ಕೆ 3, ಜಾಶ್‌ ಹೇಝಲ್‌ವುಡ್‌ 47ಕ್ಕೆ 1).


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2MgfbHn

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...