ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧ ಬಾಕ್ಸಿಂಗ್ ಡೇ ಟೆಸ್ಟ್ ದ್ವಿತೀಯ ಇನಿಂಗ್ಸ್ನಲ್ಲಿ ಗಾಯಕ್ಕೆ ತುತ್ತಾಗಿದ್ದ ಭಾರತ ತಂಡದ ಹಿರಿಯ ವೇಗಿ , ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಹಣಾಹಣಿಯಲ್ಲಿ ಆಡುವುದು ಬಹುತೇಕ ಅನುಮಾನ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ. ಇತಿಹಾಸ ಪ್ರಸಿದ್ದ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ಮೂರನೇ ದಿನವಾದ ಸೋಮವಾರ, ತಮ್ಮ ನಾಲ್ಕನೇ ಓವರ್ನ ಮೂರನೇ ಎಸೆತ ಹಾಕಿದ ನಂತರ ಉಮೇಶ್ ಯಾದವ್ ಎಡಗಾಲಿನ ಮೀನಖಂಡದಲ್ಲಿ ನೋವು ಕಾಣಿಸಿಕೊಂಡಿತ್ತು. ತಕ್ಷಣ ಅಂಗಳಕ್ಕೆ ಆಗಮಿಸಿದ ಫಿಜಿಯೊ, 33ರ ಪ್ರಾಯದ ವೇಗಿಯನ್ನು ಡ್ರೆಸ್ಸಿಂಗ್ ಕೊಠಡಿಗೆ ಕರೆದುಕೊಂಡು ಹೋದರು ಹಾಗೂ ತಡವಾಗಿ ಸ್ಕ್ಯಾನ್ಗೆ ಒಳಪಡಿಸಿದರು. "ತಮ್ಮ ನಾಲ್ಕನೇ ಓವರ್ ಬೌಲಿಂಗ್ ಮಾಡುತ್ತಿದ್ದ ವೇಳೆ ಎಡಗಾಲಿನಲ್ಲಿ ನೋವು ಕಾಣಿಸಿಕೊಂಡಿದ್ದನ್ನು ಉಮೇಶ್ ಯಾದವ್ ಹೇಳಿದ್ದರು. ಬಿಸಿಸಿಐ ವೈದ್ಯಕೀಯ ತಂಡ ಹಿರಿಯ ವೇಗಿಯನ್ನು ನಿರ್ವಹಿಸುತ್ತಿದ್ದು, ಈಗಾಗಲೇ ಅವರನ್ನು ಸ್ಕ್ಯಾನ್ಗೆ ಒಳಪಡಿಸಲಾಗಿದೆ," ಎಂದು ಬಿಸಿಸಿಐ ಮೀಡಿಯಾ ಟೀಮ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಬಾಕ್ಸಿಂಗ್ ಡೇ ಟೆಸ್ಟ್ಗೆ ಮತ್ತೆ ಅಂಗಳಕ್ಕೆ ಬಾರದ ಹಿರಿಯ ವೇಗಿ ಉಮೇಶ್ ಯಾದವ್, ಮುಂದಿನ ಟೆಸ್ಟ್ ಪಂದ್ಯಕ್ಕೂ ಲಭ್ಯರಾಗುವುದು ಬಹುತೇಕ ಅನುಮಾನ ಎಂದು ಬಿಸಿಸಿಐ ಮೂಲಗಳು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿವೆ. "ಉಮೇಶ್ ಯಾದವ್ ಗಾಯಕ್ಕೆ ತುತ್ತಾದ ಬಳಿಕ ಮೆಲ್ಬೋರ್ನ್ ಟೆಸ್ಟ್ನಿಂದ ಹೊರ ನಡೆದಿದ್ದರು. ಅಲ್ಲದೆ, ಮುಂದಿನ ಟೆಸ್ಟ್ ಪಂದ್ಯಕ್ಕೂ ಅವರು ಲಭ್ಯರಾಗುವ ಖಚಿತತೆ ಇಲ್ಲ," ಎಂದು ಬಿಸಿಸಿಐ ಮೂಲಗಳು ಹೇಳಿವೆ. ಮೂರನೇ ದಿನವಾದ ಸೋಮವಾರ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದ ಆಸ್ಟ್ರೇಲಿಯಾಗೆ ಉಮೇಶ್ ಯಾದವ್ ಆರಂಭಿಕ ಆಘಾತ ನೀಡಿದ್ದರು. ಬೌಲಿಂಗ್ ಮಾಡಿದ ತಮ್ಮ ಎರಡನೇ ಓವರ್ನಲ್ಲಿಯೇ ಆರಂಭಿಕ ಜೋ ಬರ್ನ್ಸ್ ಅವರ ವಿಕೆಟ್ ಕಿತ್ತಿದ್ದರು. ತಮ್ಮ ನಾಲ್ಕನೇ ಓವರ್ನಲ್ಲಿ ಗಾಯಕ್ಕೆ ತುತ್ತಾದ ಬಳಿಕ, ಅವರ ಓವರ್ ಅನ್ನು ಮೊಹಮ್ಮದ್ ಸಿರಾಜ್ ಮುಂದುವರಿಸಿದ್ದರು. ಈಗಾಗಲೇ ಹಿರಿಯ ವೇಗಿಗಳಾದ ಮೊಹಮ್ಮದ್ ಶಮಿ ಹಾಗೂ ಇಶಾಂತ್ ಶರ್ಮಾ ಸೇವೆಯನ್ನು ಟೀಮ್ ಇಂಡಿಯಾ ಕಳೆದುಕೊಂಡಿದೆ. ಒಂದು ವೇಳೆ ಟೆಸ್ಟ್ ಸರಣಿಯ ಇನ್ನುಳಿದ ಎರಡೂ ಪಂದ್ಯಗಳಿಗೂ ಉಮೇಶ್ ಯಾದವ್ ಅಲಭ್ಯರಾದರೆ ಪ್ರವಾಸಿಗರಿಗೆ ಭಾರಿ ನಷ್ಟವಾಗಲಿದೆ. ಇನ್ನು ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ 8 ವಿಕೆಟ್ಗಳಿಂದ ಸುಲಭ ಗೆಲುವು ಪಡೆಯಿತು. ಇದರೊಂದಿಗೆ ಬಾರ್ಡರ್ ಗವಾಸ್ಕರ್ ಟ್ರೋಫಿ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 1-1 ಸಮಬಲ ಸಾಧಿಸಿದೆ. ಪ್ರಥಮ ಇನಿಂಗ್ಸ್ನಲ್ಲಿ ವೃತ್ತಿ ಜೀವನದ 12ನೇ ಶತಕ ಸಿಡಿಸಿದ್ದ ನಾಯಕ ಅಜಿಂಕ್ಯ ರಹಾನೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/34TERQe