ಪಾಂಡವಪುರ: ಗ್ರಾಪಂ ಚುನಾವಣೆಯಲ್ಲಿ ಸೋಲನುಭವಿಸಿದ ಅಭ್ಯರ್ಥಿಗಳ ಬೆಂಬಲಿಗರು ಜೆಡಿಎಸ್ ಮುಖಂಡರಾದ ಮನ್ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು, ಪುತ್ರ ನಿಖಿಲ್ ಮತ್ತಿತರರ ಮೇಲೆ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಕಾಡೇನಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ. ಕಾಡೇನಹಳ್ಳಿ ರಾಮಚಂದ್ರು, ಪುತ್ರ ನಿಖಿಲ್, ರವಿಕುಮಾರ್, ಹರೀಶ್, ಉಮೇಶ್, ಪ್ರಕಾಶ್, ಕೆ.ಬಿ.ನರಸಿಂಹರಾಜು, ಸೋಮಶೇಖರ್ ಹಲ್ಲೆಗೊಳಗಾದವರು. ಗ್ರಾಪಂ ಚುನಾವಣೆಯಲ್ಲಿ ಕಾಡೇನಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾದ ಎಸ್.ಸ್ವಾಮೀಗೌಡ ಹಾಗೂ ಗೀತಾ ಗೆಲುವು ಸಾಧಿಸಿದ್ದಾರೆ. ಇವರ ವಿರುದ್ಧ ಸ್ಪರ್ಧಿಸಿ ಸೋತ ಇಬ್ಬರು ಅಭ್ಯರ್ಥಿಗಳ ಬೆಂಬಲಿಗರು, ಸಂಬಂಧಿಕರು ಎನ್ನಲಾದ ಯೋಗೇಶ್, ನವೀನ್, ಮಹೇಶ್, ಜಯಚಂದ್ರ, ಅನಿಲ್, ಸ್ವಾಮೀಗೌಡ, ಸತೀಶ್, ಮೇಲುಕೋಟೆಯ ಮಹೇಶ್ ಅವರು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ಜಕ್ಕನಹಳ್ಳಿಯಿಂದ ಕದಲಗೆರೆ ರಸ್ತೆ ಮಾರ್ಗವಾಗಿ ಕಾಡೇನಹಳ್ಳಿ ಗ್ರಾಮಕ್ಕೆ ಬರುತ್ತಿದ್ದ ನಿಖಿಲ್, ರವಿಕುಮಾರ್, ಉಮೇಶ್ ಅವರನ್ನು ಆರೋಪಿಗಳು ಕೆಮ್ಮಣ್ಣುಗುಂಡಿಯ ಬಳಿ ಅಡ್ಡೆಗಟ್ಟಿ ಹಲ್ಲೆ ನಡೆಸಿದ್ದಾರೆ. ವಿಷಯ ತಿಳಿದ ಕಾಡೇನಹಳ್ಳಿ ರಾಮಚಂದ್ರು ಅವರು ಸ್ಥಳಕ್ಕೆ ತೆರಳಿದ ಸಂದರ್ಭದಲ್ಲಿ ಅವರ ಮೇಲೂ ದೊಣ್ಣೆಯಿಂದ ಹಲ್ಲೆ ನಡೆಸಲಾಗಿದೆ. ಬಳಿಕ ಸಾರ್ವಜನಿಕರು ಗಲಾಟೆ ಬಿಡಿಸಿ ರಾಮಚಂದ್ರು ಮತ್ತಿತರರನ್ನು ರಕ್ಷಿಸಿ ಕಳುಹಿಸಿದ್ದಾರೆ. ಇದಾದ ಬಳಿಕ ಕಾಡೇನಹಳ್ಳಿ ಗ್ರಾಮಕ್ಕೆ ತೆರಳಿದ ಆರೋಪಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸಿದ ಗೀತಾ ಅವರ ಪತಿ ಪ್ರಕಾಶ್, ಕೆ.ಬಿ.ನರಸಿಂಹರಾಜು, ಸೋಮಶೇಖರ್ ಅವರ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆಯೇ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ನಿಖಿಲ್ ಮತ್ತು ಹರೀಶ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಆಸ್ಪತ್ರೆಗೆ ತೆರಳಿ ಗಾಯಾಳುಗಳಿಂದ ಮಾಹಿತಿ ಪಡೆದಿದ್ದಾರೆ. ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
from India & World News in Kannada | VK Polls https://ift.tt/3mVEA5G