ಕೊರೊನಾ ಅಬ್ಬರ ಕಡಿಮೆ ಆಗ್ತಿದ್ದಂತೆ ಮತ್ತೆ ಹೂವಿನ ಬೆಳೆಯತ್ತ ಮುಖ ಮಾಡಿದ ರೈತರು

ಎಚ್‌ಪಿ ಪುಣ್ಯವತಿ ಬೆಂಗಳೂರು: ಕೊರೊನಾ ಅಬ್ಬರ ಕಡಿಮೆಯಾಗಿ ಶುಭ ಸಮಾರಂಭಗಳ ಆಯೋಜನೆಗೆ ಹಾಗೂ ರಫ್ತಿಗೆ ಅವಕಾಶ ಸಿಕ್ಕಿರುವುದರಿಂದ ಹೂವಿಗೆ ಬೇಡಿಕೆ ಬರುತ್ತಿದ್ದು, ಪಾಲಿಹೌಸ್‌ಗಳಲ್ಲಿ ಮತ್ತೆ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಕೊರೊನಾ ಸಮಯದಲ್ಲಿ ಮದುವೆ ಮತ್ತಿತರ ಯಾವುದೇ ಶುಭ ಸಮಾರಂಭಗಳಿರಲಿಲ್ಲ. ಇದ್ದರೂ ಸರಳವಾಗಿ ನಡೆಯುತ್ತಿದ್ದವು. ಈ ಹಿನ್ನೆಲೆಯಲ್ಲಿ ಹೂವುಗಳಿಗೆ ಬೇಡಿಕೆಯೇ ಇಲ್ಲದಂತಾಗಿತ್ತು. ಸಾರಿಗೆ ವ್ಯವಸ್ಥೆ ಸ್ತಬ್ಧವಾಗಿ ದೇಶೀಯ ಮಾರುಕಟ್ಟೆಗೂ ಸರಬರಾಜು ಮಾಡದಂತಾಗಿತ್ತು. ರಫ್ತು ಕೂಡ ನಿಂತು ಹೋಗಿತ್ತು. ಇದರಿಂದಾಗಿ ನಷ್ಟಕ್ಕೆ ಸಿಲುಕಿದ ಹಲವು ಹಲವಾರು ಬೆಳೆಗಾರರು ಪುಷ್ಪಕೃಷಿಯ ಸಹವಾಸವೇ ಬೇಡ ಎಂದು ಹೂ ಬೆಳೆ ಕಿತ್ತು ತರಕಾರಿ ಬೆಳೆಗಳನ್ನು ಹಾಕಲಾರಂಭಿಸಿದ್ದರು. ಇದೀಗ ಪರಿಸ್ಥಿತಿ ಸುಧಾರಿಸಿರುವುದರಿಂದ ಹೂವಿಗೆ ಮತ್ತೆ ಬೇಡಿಕೆ ಬರಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ರೈತರು ಪಾಲಿ ಹೌಸ್‌ಗಳಲ್ಲಿ ಹೂ ಬೆಳೆಯಲು ಮುಂದಾಗುತ್ತಿದ್ದಾರೆ. ಕೊರೊನಾ ಮಹಾಮಾರಿ ಆಗಮಿಸುವ ಮುನ್ನ ಬೆಂಗಳೂರು ನಗರ ಮುತ್ತ ಸುತ್ತಮುತ್ತ 2,500 ಎಕರೆ ಪ್ರದೇಶದಷ್ಟು ಪಾಲಿ ಹೌಸ್‌ಗಳಲ್ಲಿ ಜರ್ಬೆರಾ, ಗುಲಾಬಿ, ಕಾರ್ನೇಷನ್‌, ಆಂತೋರಿಯಂ, ಲಿಲ್ಲಿ ಮತ್ತಿತರ ಹೂವುಗಳನ್ನು ಬೆಳೆಯಲಾಗುತ್ತಿತ್ತು. ಕೊರೊನಾ ಹಿನ್ನೆಲೆಯಲ್ಲಿ ಐದು ತಿಂಗಳ ಹಿಂದೆ ಶೇ.30 ರಷ್ಟು ಬೆಳೆಗಾರರು ಹೂ ಬೆಳೆಯನ್ನು ಸಂಪೂರ್ಣ ಕಿತ್ತು ತರಕಾರಿ ಬೆಳೆಗೆ ವರ್ಗವಾಗಿದ್ದರು. ಇನ್ನಷ್ಟು ಮಂದಿ ವರ್ಗವಾಗುವವರಿದ್ದರು. ಇದೀಗ ಅವರಲ್ಲಿ ಶೇ.20 ರಷ್ಟು ಬೆಳೆಗಾರರು ಮತ್ತೆ ಹೂವಿನ ಬೆಳೆಗೆ ವಾಪಸಾಗಿದ್ದಾರೆ ಎಂದು ಸೌತ್‌ ಇಂಡಿಯಾ ಫ್ಲೋರಿಕಲ್ಚರ್‌ ಅಸೋಸಿಯೇಷನ್‌ನ ಸದಸ್ಯ ಪ್ರಭುನಾಥ್‌ ತಿಳಿಸಿದ್ದಾರೆ. ತಿಂಗಳಿಗೆ ಒಂದು ಲಕ್ಷಕ್ಕೂ ಹೆಚ್ಚು ಖರ್ಚು ಪಾಲಿಹೌಸ್‌ಗಳಲ್ಲಿ ಪ್ರತಿ ಹೆಕ್ಟೇರ್‌ಗೆ ಕಡಿಮೆ ಎಂದರೂ ತಿಂಗಳಿಗೆ ಒಂದು ಲಕ್ಷಕ್ಕೂ ಹೆಚ್ಚು ಖರ್ಚು ಬರುತ್ತದೆ. ಒಂದು ಬೋರ್‌ವೆಲ್‌ ಅಳವಡಿಸಿದ್ದರೆ ಸುಮಾರು 40 ಸಾವಿರ ರೂ. ಮಾಸಿಕ ವಿದ್ಯುತ್‌ ಬಿಲ್‌ ಬರುತ್ತದೆ. ನಿರಂತರವಾಗಿ ಔಷಧಿಗಳನ್ನು ಸಿಂಪಡಿಸಬೇಕು. ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿರಬೇಕು. ಹೀಗಾಗಿ ಸರಕಾರ ವಿದ್ಯುತ್‌ ಬಿಲ್‌ನಲ್ಲಾದರೂ ರಿಯಾಯಿತಿ ನೀಡಬೇಕು ಎಂದು ಬೆಳೆಗಾರರು ಒತ್ತಾಯಿಸಿದ್ದಾರೆ. ಇನ್ನು ಬೆಂಗಳೂರು ಸುತ್ತಮುತ್ತ ಬೆಳೆದ ಹೂವು ಸ್ಥಳೀಯ ಮಾರುಕಟ್ಟೆಗೆ ಮಾತ್ರವಲ್ಲದೆ ಕೋಲ್ಕತ್ತಾ, ಹೈದರಾಬಾದ್‌, ದಿಲ್ಲಿ, ಮಂಬಯಿ ಮತ್ತಿತರ ಭಾಗಗಳಿಗೆ ರವಾನೆಯಾಗುತ್ತದೆ. ಹೊರ ರಾಷ್ಟ್ರಗಳಿಗೂ ರಫ್ತಾಗುತ್ತಿದೆ. ಕೋವಿಡ್‌ ಅಬ್ಬರ ಕಡಿಮೆಯಾಗುತ್ತಿದ್ದಂತೆ ನಾನಾ ಕಡೆಗಳಿಂದ ಬೇಡಿಕೆ ಬರಲಾರಂಭಿಸಿದೆ.


from India & World News in Kannada | VK Polls https://ift.tt/38Gv01w

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...