ವಿಶಾಖಪಟ್ಟಣ: ನಾಯಕತ್ವದ ಬಗ್ಗೆ ಈಗಲೂ ಸಾಕಷ್ಟು ಟೀಕೆಗಳು ಸಕ್ರಿಯವಾಗಿದೆ. ಮೈದಾನದಲ್ಲಿ ವಿರಾಟ್ ಕೊಹ್ಲಿ ತೆಗೆದುಕೊಳ್ಳುವ ನಿರ್ಣಯಗಳು ಹಾಗೂ ತಂಡದ ಸಂಯೋಜನೆ ಬಗ್ಗೆ ತಜ್ಞರು ಸೇರಿದಂತೆ ಅಭಿಮಾನಿಗಳು ಅಸಮಾಧಾನವನ್ನು ತೋಡಿಕೊಂಡಿದ್ದಾರೆ. ನಾಯಕತ್ವದ ಬಗ್ಗೆ ತಗಾದೆ ಎತ್ತುತ್ತಿರುವ ವಿಮರ್ಶಕರಿಗೆ ತಮ್ಮ ಪ್ರದರ್ಶನದ ಮೂಲಕವೇ ವಿರಾಟ್ ಕೊಹ್ಲಿ ಉತ್ತರ ನೀಡುತ್ತಲೇ ಬಂದಿದ್ದಾರೆ. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲೂ ಕೊಹ್ಲಿ ಇದನ್ನು ಸಾಬೀತು ಮಾಡಿದ್ದಾರೆ. ಮೂರನೇ ದಿನದಾಟದಲ್ಲಿ 39/3 ಎಂಬಲ್ಲಿದ್ದ ಬ್ಯಾಟಿಂಗ್ ಮುಂದುವರಿಸಿದ ಹರಿಣಗಳಿಗೆ ಡೀನ್ ಎಲ್ಗರ್ ಹಾಗೂ ತೆಂಬ ಬಾವುಮ ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಅಪಾಯಕಾರಿಯಾಗುವ ಸಾಧ್ಯತೆಯನ್ನು ಮನಗಂಡ ವಿರಾಟ್ ಕೊಹ್ಲಿ ಬಲಗೈ ವೇಗಿ ಇಶಾಂತ್ ಶರ್ಮಾರನ್ನು ಕಣಕ್ಕಿಳಿಸಿದರು. ಅಲ್ಲದೆ ತೆಂಬ ಬಾವುಮರನ್ನು ಔಟ್ ಮಾಡಲು ಮಹತ್ವದ ಸಲಹೆಯನ್ನು ನೀಡಿದರು. ಇದನ್ನೇ ಅನುಸರಿಸಿದ ಇಶಾಂತ್, ಬಲಗೈ ಬ್ಯಾಟ್ಸ್‌ಮನ್ ತೆಂಬ ಬಾವುಮರನ್ನು ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿದರು. ಇನ್ ಸ್ವಿಂಗ್ ದಾಳಿಗೆ ಬಾವುಮ ಬಳಿ ಉತ್ತರವೇ ಇರಲಿಲ್ಲ. 26 ಎಸೆತಗಳನ್ನು ಎದುರಿಸಿದ ಬಾವುಮ ಮೂರು ಬೌಂಡರಿಗಳಿಂದ 18 ರನ್ ಗಳಿಸಿದರು. ಇಲ್ಲಿ ಕೊಹ್ಲಿ ನೀಡಿದ ಟಿಪ್ಸ್ ಇಶಾಂತ್‌ಗೆ ವಿಕೆಟ್ ಪಡೆಯಲು ನೆರವಾಯಿತು. ಏತನ್ಮಧ್ಯೆ ಡೀನ್ ಎಲ್ಗರ್ ಫೈಟ್ ಬ್ಯಾಕ್ ಇನ್ನಿಂಗ್ಸ್ ಮುಂದುವರಿಸಿದರು. ಇವರಿಗೆ ನಾಯಕ ಫಾಫ್ ಡು ಪ್ಲೆಸಿಸ್ ಉತ್ತಮ ಸಾಥ್ ನೀಡಿದರು. ಇದರೊಂದಿಗೆ ದಕ್ಷಿಣ ಆಫ್ರಿಕಾ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದೆ. ಈ ಮೊದಲು ಮೊದಲ ಇನ್ನಿಂಗ್ಸ್‌ನಲ್ಲಿ ಮಯಾಂಕ್ ಅಗರ್ವಾಲ್ (215) ಅಮೋಘ ದ್ವಿಶತಕ ಹಾಗೂ ರೋಹಿತ್ ಶರ್ಮಾ ಶತಕದ (176) ಬೆಂಬಲದೊಂದಿಗೆ ಮೊದಲ ಇನ್ನಿಂಗ್ಸ್‌ನಲ್ಲಿ ಏಳು ವಿಕೆಟ್ ನಷ್ಟಕ್ಕೆ 502 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2oPnUVb