(ಜಮ್ಮು-ಕಾಶ್ಮೀರ): ವಿಶೇಷ ಸ್ಥಾನಮಾನ ತೆಗೆದುಹಾಕಿದ ಬಳಿಕ ಜಮ್ಮು-ಕಾಶ್ಮೀರದ ಸ್ಥಿತಿಗತಿ ಹೇಗಿದೆ ಎಂಬುದನ್ನು ಕಣ್ಣಾರೆ ನೋಡಲು ಭಾರತಕ್ಕೆ ಬಂದಿದ್ದಾರೆ. ಹೊಸದಿಲ್ಲಿಯಿಂದ ಜಮ್ಮು-ಕಾಶ್ಮೀರ ರಾಜಧಾನಿ ಶ್ರೀನಗರಕ್ಕೆ ವಿಮಾನದ ಮೂಲಕ ಬಂದಿಳಿದ ಐರೋಪ್ಯ ಒಕ್ಕೂಟದ ಸಂಸದರು, ವಿಶೇಷ ಬಸ್ ಏರಿ ಕಣಿವೆ ರಾಜ್ಯದಲ್ಲಿ ಸುತ್ತಾಟ ನಡೆಸುತ್ತಿದ್ದಾರೆ. ಅನುಚ್ಛೇದ 370ರ ರದ್ದತಿ ಬಳಿಕ, ಕಣಿವೆ ರಾಜ್ಯದಲ್ಲಿ ಮೊಬೈಲ್ ಸಂಪರ್ಕ ಸೇರಿದಂತೆ ಹಲವು ಸಂಪರ್ಕ ಸಾಧನಗಳನ್ನು ರದ್ದುಪಡಿಸಲಾಗಿತ್ತು. ಭಾರೀ ಬಿಗಿ ಭದ್ರತೆ ಹೇರಲಾಗಿತ್ತು. ಅಹಿತಕರ ಘಟನೆ ನಡೆಯದಂತೆ ಕರ್ಫ್ಯೂ ವಿಧಿಸಲಾಗಿತ್ತು. ಇದೀಗ ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿ ತಿಳಿಯಾಗಿದೆ. ಇಲ್ಲಿನ ವಾತಾವರಣ ಹೇಗಿದೆ? ಜನಜೀವನ ಸಹಜ ಸ್ಥಿತಿಯಲ್ಲಿದೆಯೇ? ಕಾನೂನು ಸುವ್ಯವಸ್ಥೆ ಹೇಗಿದೆ? ಜನರಿಗೆ ಅಗತ್ಯ ಮೂಲಸೌಕರ್ಯ ಲಭ್ಯವಾಗುತ್ತಿಯೇ? ಎಂಬೆಲ್ಲಾ ವಿಚಾರಗಳನ್ನು ಖುದ್ದಾಗಿ ಕಣ್ಣಾರೆ ನೋಡಿ ವಸ್ತುಸ್ಥಿತಿ ಅಧ್ಯಯನ ನಡೆಸಲು ಐರೋಪ್ಯ ಒಕ್ಕೂಟದ ಸಂಸದರು ಆಗಮಿಸಿದ್ದಾರೆ. ಸೋಮವಾರವಷ್ಟೇ ಹೊಸ ದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದ ಐರೋಪ್ಯ ಒಕ್ಕೂಟದ ಸಂಸದರ ನಿಯೋಗ, ಕಾಶ್ಮೀರದ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದಿದ್ದರು. ಬ್ರಿಟನ್, ಫ್ರಾನ್ಸ್ ಸೇರಿದಂತೆ ಹಲವು ರಾಷ್ಟ್ರಗಳ ಸಂಸದರು ಪ್ರಧಾನಿ ಜೊತೆಗಿನ ಮಾತುಕತೆ ಸೌಹಾರ್ದಯುತವಾಗಿತ್ತು ಎಂದು ಬಣ್ಣಿಸಿದ್ದರು. ಸರ್ಕಾರ ನೈಜಸ್ಥಿತಿ ಮರೆಮಾಚುತ್ತಿದೆ: ಪಿಡಿಪಿ ಐರೋಪ್ಯ ಒಕ್ಕೂಟದ ಸಂಸದರು ಶ್ರೀನಗರಕ್ಕೆ ಆಗಮಿಸಿದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ಪಿಡಿಪಿ ನಾಯಕರು, ಕೇಂದ್ರ ಸರ್ಕಾರ ನೈಜಸ್ಥಿತಿಯನ್ನು ಮರೆಮಾಚುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಕರೆದಿರುವ ಔತಣಕೂಟವನ್ನೂ ಬಹಿಷ್ಕರಿಸಿರುವ ಪಿಡಿಪಿ, ಐರೋಪ್ಯ ಒಕ್ಕೂಟದ ಸದಸ್ಯರಿಗೆ ವಸ್ತುಸ್ಥಿತಿಯನ್ನು ತೋರಿಸುವ ಕೆಲಸವಾಗಲಿ ಎಂದು ಆಶಿಸಿದ್ದಾರೆ.
from India & World News in Kannada | VK Polls https://ift.tt/2ppIpIq