ಬೆಂಗಳೂರು: ದಿಢೀರ್ ದಾಳಿ ಮೂಲಕ ಸಂಸ್ಥೆಗೆ ಹೊಸ ವರ್ಚಸ್ಸು ನೀಡಿದ್ದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ವೆಂಕಟಾಚಲ ಬುಧವಾರ ಬೆಳಿಗ್ಗೆ ನಿಧನರಾಗಿದ್ಧಾರೆ. ಭ್ರಷ್ಟ ಆಧಿಕಾರಿಗಳಲ್ಲಿ ನಡುಕ ಹುಟ್ಟಿಸಿದ್ದ ನ್ಯಾಯಮೂರ್ತಿ ವೆಂಕಟಾಚಲ, ಎಂ. ಎಸ್. ರಾಮಯ್ಯ ಅಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದರು. 90 ವರ್ಷ ವಯಸ್ಸಿನ ನ್ಯಾ. ಎನ್. ವೆಂಕಟಾಚಲ ಅವರು ಪತ್ನಿ, ಮೂವರು ಪುತ್ರರು ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ. ಬೆಂಗಳೂರಿನ ಬಳ್ಳಾರಿ ರಸ್ತೆಯ ಕಾವೇರಿ ಚಿತ್ರಮಂದಿರದ ಹಿಂಭಾಗದಲ್ಲಿರುವ ಲಕ್ಷ್ಮಿ ದೇಗುಲದ ಬಳಿ ನ್ಯಾ. ವೆಂಕಟಾಚಲ ಅವರ ನಿವಾಸವಿದೆ. ಬೆಳಗ್ಗೆ 5.45ರ ಸುಮಾರಿಗೆ ತಮ್ಮ ನಿವಾಸದಲ್ಲಿ ಇರುವಾಗಲೇ ವೆಂಕಟಾಚಲ ಅವರಿಗೆ ಎದೆ ನೋವು ಕಾಣಿಸಿಕೊಂಡಿತು. ಕೂಡಲೇ ಅವರನ್ನು ಎಂ. ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಯ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ನ್ಯಾ. ವೆಂಕಟಾಚಲ ನಿಧನರಾಗಿದ್ದಾರೆ. ಅಮೆರಿಕದಲ್ಲಿರುವ ವೆಂಕಟಾಚಲ ಅವರ ಒಬ್ಬ ಪುತ್ರ ಮತ್ತು ಪುತ್ರಿ, ಬೆಂಗಳೂರಿಗೆ ದೌಡಾಯಿಸುತ್ತಿದ್ಧಾರೆ. ಹೀಗಾಗಿ ಅವರು ಬಂದ ನಂತರ ಗುರುವಾರ (ಅಕ್ಟೋಬರ್ 31) ಅಂತ್ಯಸಂಸ್ಕಾರ ನಡೆಯಲಿದೆ. ವೆಂಕಟಾಚಲ ಅವರ ಪುತ್ರರಾದ ಶೇಷಾಚಲ ಹಾಗೂ ವೇದಾಚಲ ಇಬ್ಬರೂ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಗಳು ಅರುಣಾಚಲ ಎಂ. ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ. ಮತ್ತೊಬ್ಬ ಮಗ ಅರ್ಜುನಾಚಲ ಸಾಫ್ಟ್ವೇರ್ ಡೆವಲಪರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನ್ಯಾ. ವೆಂಕಟಾಚಲ ಅವರ ಪತ್ನಿ ಅನುಶ್ರೀಯಾ ಅವರು ಸದ್ಯ ಮನೆಯಲ್ಲಿಯೇ ಇದ್ದು, ನ್ಯಾ. ವೆಂಕಟಾಚಲ ಅವರ ನಿವಾಸದಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ನ್ಯಾ. ವೆಂಕಟಾಚಲ ನಡೆದುಬಂದ ಹಾದಿ ಜನನ: ಜೂನ್ 3, 1930 ಹುಟ್ಟೂರು: ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಮಿಟ್ಟೂರು ವಿದ್ಯಾಭ್ಯಾಸ: ಬಿಎಸ್ಸಿ, ಬಿಎಲ್ ನ್ಯಾ. ವೆಂಕಟಾಚಲ ಅವರದ್ದು ಕೃಷಿಕ ಕುಟುಂಬ. ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಮುಳಬಾಗಿಲಿನಲ್ಲಿ ಪಡೆದ ನ್ಯಾ.ವೆಂಕಟಾಚಲ, ಕೋಲಾರದಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದರು. ಬೆಂಗಳೂರಿನಲ್ಲಿ ಕಾಲೇಜು ಶಿಕ್ಷಣ ಪಡೆದರು. ಮೈಸೂರು ವಿಶ್ವ ವಿದ್ಯಾಲಯದಲ್ಲಿ ಬಿಎಸ್ಸಿ ಹಾಗೂ ಬಿಎಲ್ ಪದವಿ ಪಡೆದರು. ವೃತ್ತಿ ಜೀವನ 1955 ನವೆಂಬರ್ 16ರಂದು ಅಂದಿನ ಮೈಸೂರು ಹೈಕೋರ್ಟ್ನಲ್ಲಿ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದ ನ್ಯಾ. ವೆಂಕಟಾಚಲ, ನ್ಯಾಯವಾದಿಯಾಗಿ ಸಾಕಷ್ಟು ಜನಪ್ರಿಯರಾದರು. ಹೈಕೋರ್ಟ್ ಹಾಗೂ ಕೆಳ ನ್ಯಾಯಾಲಯಗಳಲ್ಲಿ ವಕೀಲಿ ವೃತ್ತಿ ಮಾಡುವ ವೇಳೆ ಸಿವಿಲ್, ಕ್ರಿಮಿನಲ್ ಹಾಗೂ ಸಾಂವಿಧಾನಿಕ ವಿಚಾರಗಳನ್ನು ಒಳಗೊಂಡ ಪ್ರಕರಣಗಳಲ್ಲಿ ಮೇಲುಗೈ ಸಾಧಿಸಿದ್ದರು. ಹೈಕೋರ್ಟ್, ಸುಪ್ರೀಂಕೋರ್ಟ್ ನ್ಯಾಯಮೂರ್ತಿ: 1977 ನವೆಂಬರ್ 28ರಂದು ಕರ್ನಾಟಕ ಹೈಕೋರ್ಟ್ ಸಹಾಯಕ ನ್ಯಾಯಾಧೀಶರಾಗಿ ನೇಮಕವಾದ ನ್ಯಾ. ವೆಂಕಟಾಚಲ, 1978 ಸೆಪ್ಟೆಂಬರ್ 8ರಂದು ಖಾಯಂ ನ್ಯಾಯಾಧೀಶರಾಗಿ ನಿಯುಕ್ತರಾದರು. 1992 ಮೇನಲ್ಲಿ ಕರ್ನಾಟಕ ಹೈಕೋರ್ಟ್ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾದ ವೆಂಕಟಾಚಲ, 1992 ಜುಲೈ 1ರಂದು ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾಗಿ ನೇಮಕವಾದರು. 1995ರಲ್ಲಿ ನ್ಯಾ. ವೆಂಕಟಾಚಲ ನಿವೃತ್ತರಾದರು. ನಿವೃತ್ತರಾದ ಬಳಿಕ ಲೋಕಾಯುಕ್ತರಾಗಿ ಖದರ್..! ನ್ಯಾ. ವೆಂಕಟಾಚಲ ಅವರ ಹೆಸರು ಕೇಳಿದ್ರೆ ಸಾಕು, ಭ್ರಷ್ಟರ ಎದೆಯಲ್ಲಿ ಇಂದಿಗೂ ನಡುಕ ಹುಟ್ಟುತ್ತೆ. ಯಾಕಂದ್ರೆ, ವೆಂಕಟಾಚಲ ಅವರು ಮಾಡಿದ ಕೆಲಸವೇ ಅಂಥಾದ್ದು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ನಿವೃತ್ತರಾದ ಬಳಿಕ, ವೆಂಕಟಾಚಲ ಅವರು ಕರ್ನಾಟಕ ರಾಜ್ಯವಿರಲಿ, ಇಡೀ ದೇಶದಲ್ಲೇ ಜನಪ್ರಿಯರಾದರು. ಸರ್ಕಾರಿ ಕಚೇರಿಗಳ ಮೇಲೆ ದಿಢೀರ್ ದಾಳಿ ನಡೆಸುತ್ತಿದ್ದ ವೆಂಕಟಾಚಲ, ರೆಡ್ ಹ್ಯಾಂಡ್ ಆಗಿ ಭ್ರಷ್ಟರನ್ನು ಹೆಡೆಮುರಿ ಕಟ್ಟುತ್ತಿದ್ದರು. ಜುಲೈ 2, 2001ರಂದು ಕರ್ನಾಟಕ ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ನ್ಯಾ. ವೆಂಕಟಾಚಲ, ಭ್ರಷ್ಟ ಅಧಿಕಾರಿಗಳು, ರಾಜಕಾರಣಿಗಳ ಪಾಲಿಗೆ ಸಿಂಹಸ್ವಪ್ನರಾಗಿದ್ದರು. ಈ ಕಾರಣಕ್ಕಾಗಿಯೇ ಜನಮಾನಸದಲ್ಲಿ ಅಪಾರ ಜನಪ್ರಿಯತೆ ಹೊಂದಿದ್ದರು. 'ಲಂಚ ಸಾಮ್ರಾಜ್ಯ' ಎಂಬ ಸಿನೆಮಾ, ಇವರ ಕಾರ್ಯಶೈಲಿಯಿಂದ ಪ್ರಭಾವಿತವಾಗಿ ನಿರ್ಮಾಣವಾಯ್ತು. ನ್ಯಾ. ವೆಂಕಟಾಚಲ ನಿಧನಕ್ಕೆ ಗಣ್ಯರ ಸಂತಾಪ ನ್ಯಾ. ವೆಂಕಟಾಚಲ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಲೋಕಾಯುಕ್ತ ಸಂಸ್ಥೆಗೆ ವೆಂಕಟಾಚಲ ಅವರು ಘನತೆ ತಂದುಕೊಟ್ಟಿದ್ದರು ಎಂದು ಟ್ವೀಟ್ ಮಾಡಿದ್ದಾರೆ. ನ್ಯಾ.ವೆಂಕಟಾಚಲ ಅವರು ಲೋಕಾಯುಕ್ತರಾಗಿ ಭ್ರಷ್ಟರ ವಿರುದ್ಧ ಸಮರವನ್ನೇ ಸಾರಿ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
from India & World News in Kannada | VK Polls https://ift.tt/2NBgWMj