ಬೆಂಗಳೂರು: ಇಂದು ನಾಡಿನಾದ್ಯಂತ ಕನ್ನಡ ರಾಜ್ಯೋತ್ಸವನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಮೈಸೂರು ರಾಜ್ಯ ಕರ್ನಾಟಕವಾಗಿ ರೂಪು ತಳೆದ ದಿನದ ನೆನಪಿಗಾಗಿ ನ. 1ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದ್ದು, ಈ ವರ್ಷ 64ನೇ ಆಚರಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹೆಚ್ ಡಿ ಕುಮಾರಸ್ವಾಮಿ ಸೇರಿದಂತೆ ಅನೇಕ ಗಣ್ಯರು ಶುಭಾಶಯ ಕೋರಿದ್ದಾರೆ. ಪ್ರಧಾನಿ ಮೋದಿ ಕನ್ನಡದಲ್ಲೇ ಟ್ವೀಟ್ ಮಾಡಿ ಶುಭಾಶಯ ಸಲ್ಲಿಸಿದ್ದು, "ರಾಷ್ಟ್ರದ ಬೆಳವಣಿಗೆಗೆ ಕರ್ನಾಟಕ ನೀಡಿದ ಅತ್ಯುನ್ನತ ಕೊಡುಗೆಯನ್ನು ಆಚರಣೆ ಮಾಡುವ ದಿವಸವೇ ಕರ್ನಾಟಕ ರಾಜ್ಯೋತ್ಸವ. ಕನ್ನಡಿಗರ ವಿಶಾಲ ಹೃದಯವಂತಿಕೆ ಹಾಗೂ ಕನ್ನಡ ನಾಡಿನ ಸೌಂದರ್ಯ ಹೆಸರುವಾಸಿಯಾದದ್ದು. ಬರುವ ದಿನಗಳಲ್ಲಿ ಕರ್ನಾಟಕದ ಅಭಿವೃದ್ಧಿಗಾಗಿ ಪ್ರಾರ್ಥಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು 'ಕನ್ನಡ ಎಂದರೆ ಜೀವದಾಯಿನಿ. ಕನ್ನಡದ ಒಳಿತಿಗಾಗಿ ಸದಾ ದುಡಿಯೋಣ. ಕನ್ನಡ ರಾಜ್ಯೋತ್ಸವದ ಶುಭಾಶಯಗಳು" ಎಂದು ಟ್ವೀಟ್ ಮಾಡಿದ್ದಾರೆ. ಮಾಜಿ ಸಿಎಂ ಹೆಚ್ ಡಿಕೆ ತಮ್ಮ ಟ್ವೀಟ್ ನಲ್ಲಿ " ಭಾಷೆ ಆಧಾರದ ಮೇಲೆ ನಮ್ಮದೊಂದು ನಾಡು ಕಟ್ಟಿಕೊಂಡ ದಿನವಿದು. ಕನ್ನಡಿಗರನ್ನು ಬೆಸೆದ ಕನ್ನಡ ಕೇವಲ ಭಾಷೆಯಲ್ಲ, ನಮ್ಮ ಅಸ್ಮಿತೆ. ನಮ್ಮ ಹೆಗ್ಗುರುತು. ಕನ್ನಡ ನಾಡಿನ ರಚನೆಗೆ ಶ್ರಮಿಸಿದ ಎಲ್ಲರನ್ನೂ ನೆನೆಯುತ್ತೇನೆ. ಕನ್ನಡ ಹೋರಾಟಗಾರರನ್ನು ಸ್ಮರಿಸುತ್ತೇನೆ. ಜಗತ್ತಿನ ಸಮಸ್ತ ಕನ್ನಡಿಗರಿಗೆ ರಾಜ್ಯೋತ್ಸವದ ಶುಭಾಶಯಗಳು" ಎಂದು ಬರೆದುಕೊಂಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ನಾಡಿನ ಜನತೆಗೆ ಶುಭಾಶಯ ಸಲ್ಲಿಸಿದ್ದು, ಪ್ರೀತಿಯ ಕನ್ನಡ ಬಂಧುಗಳಿಗೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕನ್ನಡಕ್ಕಾಗಿ ದುಡಿದ, ಮಡಿದ ಮಹನೀಯರನ್ನೆಲ್ಲಾ ಗೌರವದಿಂದ ನೆನೆಯೋಣ. ಕನ್ನಡವನ್ನು ಕಟ್ಟುವ, ಬೆಳೆಸುವ ಮತ್ತು ಉಳಿಸುವ ಕಾಯಕದಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುತ್ತೇವೆ ಎಂದು ಪಣತೊಡೋಣ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂದಿದ್ದಾರೆ.
from India & World News in Kannada | VK Polls https://ift.tt/2JF4YzO