ವಾಷಿಂಗ್ಟನ್ (ಅಮೆರಿಕ): ಕುಖ್ಯಾತ ಭಯೋತ್ಪಾದಕ ಸಂಘಟನೆ ಐಸಿಸ್ ಅಧಿನಾಯಕ ಹತ್ಯೆ ಮಾಡಲಾಗಿದೆ. ಈ ಮೂಲಕ, ಇಡೀ ವಿಶ್ವಕ್ಕೇ ಕಂಟಕವಾಗಿದ್ದ ಅತ್ಯುಗ್ರ ನಾಯಕನೊಬ್ಬನನ್ನು ಅಮೆರಿಕ ನಿರ್ನಾಮ ಮಾಡಿದೆ. ಬಗ್ದಾದಿ ಹತ್ಯೆಯಾಗಿದ್ದಾನೆ ಎಂದು ಖುದ್ದು ಅಮೆರಿಕ ಅಧ್ಯಕ್ಷ ಸುದ್ದಿಗೋಷ್ಠಿ ನಡೆಸಿ ಘೋಷಿಸಿದ್ಧಾರೆ. ‘ನಾಯಿಯಂತೆ ಸತ್ತ ಬಗ್ದಾದಿ’: ಟ್ರಂಪ್ ಬಣ್ಣನೆ!ಐಸಿಸ್ ಸಂಘಟನೆ ನಾಯಕ ಬಗ್ದಾದಿ ಹತ್ಯೆಯ ಕಾರ್ಯಾಚರಣೆಯ ನೇರ ದೃಶ್ಯಾವಳಿಗಳನ್ನು ಅಮೆರಿಕದಲ್ಲಿ ಕುಳಿತು ವೀಕ್ಷಿಸುತ್ತಿದ್ದ ಡೊನಾಲ್ಡ್ ಟ್ರಂಪ್, ಬಗ್ದಾದಿ ಸಾವನ್ನು ನಾಯಿಯ ಸಾವಿಗೆ ಹೋಲಿಸಿದ್ದಾರೆ. ವಾಷಿಂಗ್ಟನ್ನಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ ಮಾತನಾಡಿದ ಟ್ರಂಪ್, 'ಅಮೆರಿಕ ಬಗ್ದಾದಿಯನ್ನು ಹಲವು ವರ್ಷಗಳಿಂದ ಹುಡುಕುತ್ತಿತ್ತು. ಇದು ಇಡೀ ವಿಶ್ವದ ಪಾಲಿಗೆ ಅತ್ಯಂತ ಪ್ರಮುಖ ಕಾರ್ಯಾಚರಣೆಯಾಗಿತ್ತು. ಇದು ಅಪಾಯಕಾರಿ ಕಾರ್ಯಾಚರಣೆಯೂ ಆಗಿತ್ತು. ನಾನು ಅಮೆರಿಕ ಸೇನೆಯ ಕಾರ್ಯಾಚರಣೆಯನ್ನು ಖುದ್ದಾಗಿ ನೇರಪ್ರಸಾರದಲ್ಲಿ ನೋಡಿದೆ. ಅಮೆರಿಕ ಸೇನೆಯ ಯಾವುದೇ ಒಬ್ಬ ಸೈನಿಕನೂ ಸತ್ತಿಲ್ಲ. ಆದ್ರೆ, ಬಗ್ದಾದಿಯ ಅಂಗರಕ್ಷಕರು, ಆತನ ಸುತ್ತಲೂ ಇದ್ದ ಉಗ್ರರು ಸಂಪೂರ್ಣವಾಗಿ ನಿರ್ನಾಮವಾಗಿದ್ದಾರೆ. ಬಗ್ದಾದಿ ಜೊತೆಗಿದ್ದ 14 ಮಕ್ಕಳ ಪೈಕಿ 11 ಮಕ್ಕಳನ್ನ ರಕ್ಷಣೆ ಮಾಡಿದೆವು. ಆದ್ರೆ, ಮೂವರು ಮಕ್ಕಳನ್ನು ಬಗ್ದಾದಿ ತನ್ನ ಜೊತೆಗೆ ಇರಿಸಿಕೊಂಡಿದ್ದ. ಆತ ಬಾಂಬ್ ಕಟ್ಟಿಕೊಂಡಿದ್ದ. ಸುರಂಗದೊಳಗೆ ಓಡುತ್ತಿದ್ದ. ಆ ಸುರಂಗ ತುಂಬಾ ದೂರ ಇರಲಿಲ್ಲ. ಓಡುವಾಗ ಬಗ್ದಾದಿ ಕೂಗುತ್ತಿದ್ದ, ಅರಚುತ್ತಿದ್ದ, ಅಳುತ್ತಿದ್ದ. ಮೂವರು ಪುಟ್ಟ ಮಕ್ಕಳನ್ನೂ ತನ್ನೊಂದಿಗೆ ಕರೆದುಕೊಂಡು ಓಡಿದ. ಸೇನೆಯ ನಾಯಿಗಳು ಅವನನ್ನು ಹಿಂಬಾಲಿಸುತ್ತಿದ್ದವು. ಸುರಂಗದ ಅಂತ್ಯದವರೆಗೂ ಓಡಿದ ಬಗ್ದಾದಿಗೆ ಮುಂದೆ ದಾರಿ ಕಾಣಲಿಲ್ಲ. ಬಾಂಬ್ ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ. ತನ್ನ ಮೂವರು ಮಕ್ಕಳನ್ನೂ ಕೊಂದು ಹಾಕಿದ. ಬಗ್ದಾದಿ ದೇಹದ ತುಣುಕುಗಳನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಿ ಅದು ಆತನ ಶವವೇ ಎಂದು ದೃಢಪಡಿಸಿಕೊಂಡಿದ್ದೇವೆ. ಆತ ಸಾಯುವ ಕೊನೆ ಗಳಿಗೆಯಲ್ಲಿ ಭಯದಲ್ಲಿದ್ದ, ಆತಂಕದಿಂದ ಓಡಿದ, ಅಮೆರಿಕ ಸೇನೆಗೆ ಹೆದರಿದ. ಆತನ ಸಾವಿನ ಬಳಿಕ ಕಾರ್ಯಾಚರಣೆ ನಡೆದ ಸ್ಥಳದಲ್ಲಿ ಐಸಿಸ್ಗೆ ಸಂಬಂಧಿಸಿದ ಹಲವು ಮಾಹಿತಿಗಳು ಸಿಕ್ಕಿವೆ. ಐಸಿಸ್ನ ಮುಂದಿನ ಪ್ಲಾನ್ ಏನಾಗಿತ್ತು ಅನ್ನೋದ್ರ ಬ್ಲೂ ಪ್ರಿಂಟ್ ಕೂಡಾ ಸಿಕ್ಕಿದೆ. ಬಾಗ್ದಾದಿ ಹತ್ಯೆಯಿಂದ ನಮ್ಮ ಸೇನಾ ಪಡೆಗಳ ಸಾಮರ್ಥ್ಯ ಮತ್ತೆ ಸಾಬೀತಾಗಿದೆ. ನಾವು ಕಳೆದ ತಿಂಗಳಷ್ಟೇ ಬಿನ್ ಲಾಡನ್ ಪುತ್ರನನ್ನು ಕೊಂದಿದ್ದೆವು. ಅಲ್ ಖೈದಾ ನಾಶಗೊಳಿಸಿದ್ದವು. ಇದೀಗ ಐಸಿಸ್ ಸಂಪೂರ್ಣವಾಗಿ ನಿರ್ನಾಮವಾಗಿದೆ. ಇದೇ ಪಾಠ ವಿಶ್ವದ ಎಲ್ಲ ಉಗ್ರ ನಾಯಕರಿಗೂ ಅನ್ವಯವಾಗುತ್ತೆ. ತಾವು ಎಷ್ಟು ಬಲಹೀನರು ಎಂದು ಅವರಿಗೆ ಗೊತ್ತಿಲ್ಲ. ನಮ್ಮ ಸಾಮರ್ಥ್ಯದ ಎದುರು ಅವರು ನಾಯಿಗಳು, ಕೇವಲ ಕುನ್ನಿಗಳಷ್ಟೇ’ ಎಂದು ಡೊನಾಲ್ಡ್ ಟ್ರಂಪ್ ಇಡೀ ಕಾರ್ಯಾಚರಣೆಯನ್ನು ವಿವರಿಸಿದ್ದಾರೆ. ಈ ಕಾರ್ಯಾಚರಣೆಗೆ ಸಹಕಾರ ನೀಡಿದ ರಷ್ಯಾ, ರಷ್ಯಾ, ಟರ್ಕಿ, ಸಿರಿಯಾ ಹಾಗೂ ಇರಾಕ್ ದೇಶಗಳಿಗೆ ಟ್ರಂಪ್ ಧನ್ಯವಾದ ಅರ್ಪಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ರಾತ್ರಿಯಷ್ಟೇ ಒಂದು ಅಚ್ಚರಿಯ ಟ್ವೀಟ್ ಮಾಡಿದ್ದರು. ಅತ್ಯಂತ ದೊಡ್ಡ ಘಟನೆಯೊಂದು ನಡೆಯಲಿದೆ ಎಂದು ಟ್ವೀಟಿಸಿದ್ದರು. ಅವರ ಟ್ವೀಟ್ ಭಾರೀ ಕುತೂಹಲ ಕೆರಳಿಸಿತ್ತು. ಇದೀಗ ಟ್ರಂಪ್ ಟ್ವೀಟ್ನ ಹಿನ್ನೆಲೆ ಬಹಿರಂಗವಾಗಿದೆ. ಬಗ್ದಾದಿ ತಲೆಗೆ 25 ದಶಲಕ್ಷ ಡಾಲರ್ ಮೊತ್ತದ ಬಹುಮಾನವನ್ನು ಅಮೆರಿಕ ಘೋಷಿಸಿತ್ತು. 48 ವರ್ಷದ ಬಗ್ದಾದಿ ಇರಾಕ್ ನಿವಾಸಿಯಾಗಿದ್ದು, ಐಸಿಸ್ ಸಂಘಟನೆಯ ಸಂಸ್ಥಾಪಕ ಹಾಗೂ ಮುಖ್ಯಸ್ಥನಾಗಿದ್ದ. ವಿಶ್ವದ ಮೋಸ್ಟ್ ಉಗ್ರ ಬಗ್ದಾದಿ, 2014ರಿಂದಲೂ ಭೂಗತನಾಗಿದ್ದ. ಕಳೆದ ಏಪ್ರಿಲ್ನಲ್ಲಿ ವಿಡಿಯೋವೊಂದರಲ್ಲಿ ಕಾಣಿಸಿಕೊಂಡಿದ್ದ. ಅಲ್ಲಿಯವರೆಗೂ ಬಗ್ದಾದಿ ಬದುಕಿದ್ದಾನಾ, ಸತ್ತಿದ್ದಾನಾ ಅನ್ನುವ ಸುಳಿವೇ ಇರಲಿಲ್ಲ. 2017ರಲ್ಲಿ ಅಮೆರಿಕ ನಡೆಸಿದ್ದ ವಾಯುದಾಳಿಯೊಂದರಲ್ಲಿ ಬಾಗ್ದಾದಿ ಹತನಾಗಿದ್ದಾನೆ ಎಂದೇ ನಂಬಲಾಗಿತ್ತು. ಆದ್ರೆ, ಅಲ್ಲಿಂದ ಹೇಗೋ ಕಾಲ್ಕಿತ್ತಿದ್ದ ಬಗ್ದಾದಿ, ಇದೀಗ ಸರ್ವನಾಶವಾಗಿದ್ದಾನೆ.
from India & World News in Kannada | VK Polls https://ift.tt/2PkAIxX