ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಮತ್ತೆ ರಾಜಕೀಯ ದ್ವೇಷದ ನೆತ್ತರು ಹರಿದಿದೆ. ಹೂಗ್ಲಿ ಜಿಲ್ಲೆಯ ಆರಾಮ್ಬಾಗ್ ಪ್ರದೇಶದಲ್ಲಿ ಸ್ಥಳೀಯ ನಾಯಕನ ಹತ್ಯೆಯಾಗಿದ್ದು, ಇದರ ಹಿಂದೆ ಆಡಳಿತಾರೂಢ ಪಕ್ಷದವರ ಕೈವಾಡವಿದೆ ಎಂದು ಬಿಜೆಪಿ ಆರೋಪಿಸುತ್ತಿದೆ. ಮೃತ ಶೇಖ್ ಅಮಿರ್ ಖಾನ್, ಸ್ಥಳೀಯ ಬಿಜೆಪಿ ನಾಯಕರಾಗಿದ್ದು, ಕತ್ತಿಯಿಂದ ದಾಳಿ ಮಾಡಿ ಮತ್ತು ಬಿದಿರು ಕೋಲಿನಿಂದ ಥಳಿಸಿ ಮಾರಣಾಂತಿಕ ದಾಳಿ ಮಾಡಲಾಗಿತ್ತು. ಗಂಭೀರ ಗಾಯಗೊಂಡ ಅವರು ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ತೃಣಮೂಲ ಕಾಂಗ್ರೆಸ್ ಪಕ್ಷದ ಮೂಲಗಳು ಈ ಆರೋಪವನ್ನು ನಿರಾಕರಿಸಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಲ್ಲಿ ಕಾನೂನು ಸುವ್ಯವಸ್ಥೆ ಇಲ್ಲವೇ ಇಲ್ಲ. ಈ ಹತ್ಯೆ ಹಿಂದೆ ಇದೆ. ದಾಳಿಯಾದ ಸ್ಥಳ ಎಸ್ಡಿಪಿಒ ಕಚೇರಿಯಿಂದ ಹೆಚ್ಚು ದೂರವಿಲ್ಲ. ಆದರೂ ಸ್ಥಳಕ್ಕೆ ತಲುಪಲು ಪೊಲೀಸರು ದೀರ್ಘ ಸಮಯ ತೆಗೆದುಕೊಂಡರು ಎಂದು ಸ್ಥಳೀಯ ಬಿಜೆಪಿ ನಾಯಕರು ದೂರಿದ್ದಾರೆ. ಆದರೆ ಹತ್ಯೆಯಲ್ಲಿ ತಮ್ಮ ಪಕ್ಷದವರ ಕೈವಾಡವಿಲ್ಲ ಎಂದಿರುವ ಹೂಗ್ಲಿ ಟಿಎಂಸಿ ನಾಯಕ, ಅದರ ಬದಲಾಗಿ ಬಿಜೆಪಿ ಕಾರ್ಯಕರ್ತರೇ ಲೋಕಸಭಾ ಚುನಾವಣೆಯ ಬಳಿಕ ನಮ್ಮ ಕಾರ್ಯಕರ್ತರ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಹತ್ಯೆಯನ್ನು ಖಂಡಿಸಿ ರಾಷ್ಟ್ರೀಯ ಹೆದ್ದಾರಿ ತಡೆ ಹಿಡಿದು ಪ್ರತಿಭಟನೆ ನಡೆಸಿರುವ ಬಿಜೆಪಿ ಕಾರ್ಯಕರ್ತರು, ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.
from India & World News in Kannada | VK Polls https://ift.tt/2BLIGYU