ವೃತ್ತಕ್ಕೆ ಮಧುಕರ್‌ ಶೆಟ್ಟಿ ಹೆಸರು ಪ್ರಸ್ತಾವನೆ ತಿರಸ್ಕಾರ; ಪೂರ್ವದ್ವೇಷಕ್ಕಿಳಿಯಿತೇ ಬಿಎಸ್‌ವೈ ಸರಕಾರ?

ಬೆಂಗಳೂರು: ದಿವಂಗತ ಮಧುಕರ್‌ ಶೆಟ್ಟಿ ಅವರ ಹೆಸರನ್ನು ನಗರದ ವರ್ತೂರು ಕೋಡಿ ವೃತ್ತಕ್ಕೆ ನಾಮಕರಣ ಮಾಡುವ ಬಿಬಿಎಂಪಿ ಪ್ರಸ್ತಾವನೆಯನ್ನು ರಾಜ್ಯ ಸರಕಾರ ತಿರಸ್ಕರಿಸಿದೆ. ಹಗದೂರು ವ್ಯಾಪ್ತಿಯ ವರ್ತೂರು ಕೋಡಿ ವೃತ್ತಕ್ಕೆ ಮಧುಕರ್‌ ಶೆಟ್ಟಿ ವೃತ್ತ ಎಂದು ನಾಮಕರಣ ಮಾಡಲು 2020ರ ಮಾ.7ರಂದು ಪಾಲಿಕೆಯ ಕೌನ್ಸಿಲ್‌ ಸಭೆಯಲ್ಲಿ ನಿರ್ಣಯ ಕೈಗೊಂಡು, ಅನುಮೋದನೆಗಾಗಿ ಸರಕಾರಕ್ಕೆ ಕಳುಹಿಸಲಾಗಿತ್ತು. ಪ್ರಸ್ತಾವನೆ ಪರಿಶೀಲಿಸಿದ ಸರಕಾರ, ನಾಮಕರಣ ಮಾಡಲು ಒಪ್ಪಿಲ್ಲ ಎಂದು ಹೇಳಿದೆ. ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಿ.15ರಂದು ಬಿಬಿಎಂಪಿ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ. ಆದರೆ, ವೃತ್ತಕ್ಕೆ ಮಧುಕರ್‌ ಶೆಟ್ಟಿ ಹೆಸರು ನಾಮಕರಣ ಮಾಡುವ ಪ್ರಸ್ತಾವನೆ ತಿರಸ್ಕರಿಸಲು ಸರಕಾರ ಯಾವುದೇ ಕಾರಣ ನೀಡಿಲ್ಲ. ಸರಕಾರದ ಈ ಕ್ರಮದ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯಾಗಿದೆ. ಮಧುಕರ್‌ ಶೆಟ್ಟಿ ಲೋಕಾಯುಕ್ತ ಸಂಸ್ಥೆಯಲ್ಲಿದ್ದಾಗ ಉತ್ತಮ ಹೆಸರು ಪಡೆದಿದ್ದರು. ಅಲ್ಲದೆ ಲೋಕಾಯುಕ್ತರ ಕಾರ್ಯವೈಖರಿ ಬಗ್ಗೆಯು ಬಹಿರಂಗವಾಗಿ ಅತೃಪ್ತಿ ವ್ಯಕ್ತಪಡಿಸಿದ್ದರು. ಚಿಕ್ಕಮಗಳೂರು, ಚಾಮರಾಜನಗರ ಸೇರಿದಂತೆ ಕೆಲಸ ಮಾಡಿದ ಕಡೆಗಳಲ್ಲಿ ಜನಾನುರಾಗಿಯಾಗಿದ್ದರು. ಲೋಕಾಯುಕ್ತ ಸಂಸ್ಥೆಯಲ್ಲಿದ್ದಾಗ ಕೆಜಿಎಫ್‌ ಶಾಸಕ ವೈ.ಸಂಪಂಗಿ ಅವರು ಶಾಸಕರ ಭವನದಲ್ಲಿ ಲಂಚ ಪಡೆಯುವ ವೇಳೆ ಟ್ರ್ಯಾಪ್‌ ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು. ಬಿಬಿಎಂಪಿ ಸದಸ್ಯ ಗೋವಿಂದರಾಜು ಬಂಧನ, ಬಳ್ಳಾರಿ ಗಣಿಗಾರಿಕೆ ಕುರಿತು ತನಿಖೆ, ಕೆಐಎಡಿಬಿ ಭೂ ಹಗರಣದಲ್ಲಿ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು, ಡಿನೋಟಿಫಿಕೇಷನ್‌ ಪ್ರಕರಣದಲ್ಲಿ ಅಂದಿನ ಮುಖ್ಯಮಂತ್ರಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳಿದ್ದ ಮಧುಕರ್‌ ಶೆಟ್ಟಿ, ವಾಪಸ್‌ ಮರಳಿದ ಬಳಿಕ ಕೆಲ ಕಾಲ ಸಿಐಡಿಯಲ್ಲಿ ಕಾರ್ಯನಿರ್ವಹಿಸಿದ್ದರು. ನಂತರ ಹೈದರಾಬಾದ್‌ನಲ್ಲಿರುವ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಪೊಲೀಸ್‌ ಅಕಾಡೆಮಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಈ ವೇಳೆ ಅನಾರೋಗ್ಯದಿಂದ ಅಕಾಲಿಕವಾಗಿ ನಿಧನರಾಗಿದ್ದರು. ಮಧುಕರ್‌ ಶೆಟ್ಟಿ ಅವರ ದಕ್ಷತೆ, ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿ ವೃತ್ತಕ್ಕೆ ಹೆಸರಿಡಲು ಯೋಚಿಸಲಾಗಿತ್ತು. ಹಾಲಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ವೇಳೆ ದಾಖಲಾಗಿದ್ದ ಡಿನೋಟಿಫಿಕೇಷನ್‌ ಪ್ರಕರಣದ ತನಿಖೆಯನ್ನು ಮಧುಕರ್‌ ಶೆಟ್ಟಿ ಕೂಡ ನಡೆಸಿ ಬಿಎಸ್‌ವೈ ಸರ್ಕಾರಕ್ಕೆ ಸಿಂಹಸ್ವಪ್ನವಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ಹೆಸರನ್ನು ವೃತ್ತಕ್ಕೆ ಇರಿಸುವ ಪ್ರಸ್ತಾವನೆಯನ್ನು ತಿರಸ್ಕರಿಸಿ ಧ್ವೇಷ ಸಾಧನೆಗೆ ಇಳಿದಿರಬಹುದು ಎಂಬ ಮಾತುಗಳೂ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.


from India & World News in Kannada | VK Polls https://ift.tt/3hiZw5p

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...