ಮಂಗಳೂರು: ಭಾರತದ ವಿಶ್ವಾಸಾರ್ಹ ಏರ್‌ಲೈನ್ಸ್ ಸಂಸ್ಥೆಯಾದ ಗೋ ಏರ್ ತನ್ನ ದೇಶೀಯ ಜಾಲವನ್ನು ಮತ್ತಷ್ಟು ಬಲಪಡಿಸಲು ನಿರ್ಧರಿಸಿದ್ದು, ಮುಂಬಯಿ-ಮಂಗಳೂರಿಗೆ ಪ್ರತಿದಿನ ನೇರ ವಿಮಾನ ಸೌಲಭ್ಯ ಆರಂಭಿಸಿದೆ. ಡಿ.24ರಿಂದ ಹೊಸ ಸೇವೆ ಆರಂಭವಾಗಿದ್ದು, ಅತ್ಯಾಧುನಿಕ ಏರ್ ಬಸ್ 320 ನಿಯೋ ಮೂಲಕ ಗೋ ಏರ್ ಮತ್ತು ಮುಂಬಯಿಯನ್ನು ಸಂಪರ್ಕಿಸಲಿದೆ. ಮಂಗಳೂರಿಗೆ ತ್ವರಿತ ಮತ್ತು ಅನುಕೂಲಕರ ಸಂಪರ್ಕ ಒದಗಿಸುವ ದೃಷ್ಟಿಯಿಂದ ಈ ವಿಮಾನದ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. ಈ ವಿಮಾನ ಪ್ರಯಾಣದ ಟಿಕೆಟ್ ಬುಕ್ಕಿಂಗ್‌ನ್ನು ಕಾಯ್ದಿರಿಸುವಿಕೆ ಎಲ್ಲಪೋರ್ಟಲ್‌ಗಳ ಮೂಲಕ ಮಾಡಲು ಅವಕಾಶವಿದೆ ಎಂದು ಗೋ ಏರ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೌಶಿಕ್ ಖೋನಾ ಬುಧವಾರ ವರ್ಚುಯಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜಿ8 0338 ಬೆಳಗ್ಗೆ 9.30ಕ್ಕೆ ಮಂಗಳೂರಿನಿಂದ ಹೊರಟು, ಬೆಳಗ್ಗೆ 11ಕ್ಕೆ ತಲುಪಲಿದೆ. ಜಿ8 0335 ವಿಮಾನ ಮುಂಬಯಿಯಿಂದ ಬೆಳಗ್ಗೆ 7.40ಕ್ಕೆ ಹೊರಟು 9 ಗಂಟೆಗೆ ಮಂಗಳೂರು ತಲುಪಲಿದೆ. ದೇಶದಲ್ಲಿಅತಿವೇಗವಾಗಿ ಬೆಳೆಯುತ್ತಿರುವ ಹಾಗೂ ಕರ್ನಾಟಕದ ಪ್ರಮುಖ ಬಂದರು ನಗರವಾಗಿರುವ ಮಂಗಳೂರು ಮತ್ತು ಮುಂಬಯಿನ ವ್ಯವಹಾರ ಮತ್ತು ಪ್ರವಾಸೋದ್ಯಮ ಇನ್ನಷ್ಟು ಪ್ರಗತಿ ಹೊಂದಲು ಇದು ಪೂರಕವಾಗಲಿದೆ ಎಂದರು. ದೇಶೀಯ ವಿಮಾನ ಯಾನ ಬೇಡಿಕೆಯ ಪುನಶ್ಚೇತನ ಕಂಡುಬರುತ್ತಿದ್ದು, ಕಳೆದ ತಿಂಗಳಿಗೆ ಹೋಲಿಸಿದರೆ ಈ ತಿಂಗಳು ಶೇ.10ರಷ್ಟು ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದು, 2020ರ ನವೆಂಬರ್ ವೇಳೆಗೆ ಸುಮಾರು 63.54 ಲಕ್ಷ ತಲುಪಿದೆ. ಈ ಬೇಡಿಕೆಗೆ ಸ್ಪಂದಿಸಿ, ಮುಂಬಯಿಯಿಂದ ಮಂಗಳೂರಿಗೆ ಪ್ರತಿದಿನ ನೇರ ವಿಮಾನ ಸೇವೆ ಆರಂಭಿಸಲಾಗುತ್ತಿದೆ ಎಂದರು.
from India & World News in Kannada | VK Polls https://ift.tt/2KwJCZb