ಪಾಟ್ನಾ: ದೇಶದೆಲ್ಲೆಡೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಬಿಹಾರ ವಿಧಾನಸಭಾ ಚುನಾವಣೆಯನ್ನು ಮುಂದೂಡಬೇಕು ಎಂದು ಮಾಜಿ ಕೇಂದ್ರ ಸಚಿವ ಯಶವಂತಾ ಸಿನ್ಹಾ ಆಗ್ರಹಿಸಿದ್ದಾರೆ. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ರಾಜಕೀಯ ಚಟುವಟಿಕೆಗಳು ಸ್ಥಗಿತಗೊಂಡಿದೆ. ಆದರೆ ವಿಧಾನಸಭಾ ಚುನಾವಣೆಯನ್ನು ಮುಂದೂಡುವ ನಿಟ್ಟಿನಲ್ಲಿ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೊರೊನಾ ಸಾಂಕ್ರಾಮಿಕ ರೋಗ ಹೆಚ್ಚುತ್ತಿರುವ ಈ ಅವಧಿಯಲ್ಲಿ ಚುನಾವಣೆ ನಡೆಸಿದರೆ ಮತಗಟ್ಟೆಗಳು ಕೊರೊನಾ ಕೇಂದ್ರಗಳಾಗಿ ಬದಲಾಗಬಹುದು, ಆಗ ಕೊರೊನಾ ಎಷ್ಟು ಪ್ರಮಾಣದಲ್ಲಿ ಹರಡಿದೆ ಎಂಬುದನ್ನು ಅಂದಾಜಿಸುವುದು ಬಹಳ ಕಷ್ಟವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಬಿಹಾರ ಸರ್ಕಾರವು ಚುನಾವಣಾ ಆಯೋಗದ ಮುಂದೆ ಕೊರೊನಾ ಪ್ರಕರಣಗಳು ಕಡಿಮೆಯಿದೆ ಎಂದು ತೋರಿಸಲು ನಿಜವಾದ ಅಂಕಿಅಂಶಗಳನ್ನು ಮರೆಮಾಚುತ್ತಿವೆ ಎಂದು ಆರೋಪಿಸಿರುವ ಸಿನ್ಹಾ, ಒಂದು ವೇಳೆ ನವೆಂಬರ್ ಅಂತ್ಯದ ಬಳಿಕ ಚುನಾವಣೆ ನಡೆದರೆ ಬಿಹಾರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಬರಬಹುದು. ಆಗ ತಾನು ಮುಖ್ಯಮಂತ್ರಿ ಸ್ಥಾನ ತ್ಯಜಿಸಬೇಕಾಗಬಹುದು ಎಂಬ ಭಯದಿಂದ ನಿತಿಶ್ ಕುಮಾರ್ ಚುನಾವಣೆ ಮುಂದೂಡಲು ಮನಸ್ಸು ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಬಿಹಾರ ವಿಧಾನಸಭೆಯ ಅವಧಿ ಅಂತ್ಯಗೊಳ್ಳುತ್ತಿರುವ ಹಿನ್ನೆಲೆ ಈ ಬಾರಿ ಚುನಾವಣೆ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ ನಡೆಯುವ ಸಾಧ್ಯತೆಯಿದೆ. ಈ ಬಗ್ಗೆ ಚುನಾವಣಾ ಆಯೋಗ ಇನ್ನೂ ಯಾವುದೇ ಅಧಿಕೃತ ಮಾಹಿತಿ ಪ್ರಕಟಿಸಿಲ್ಲ.
from India & World News in Kannada | VK Polls https://ift.tt/2CMWQNF