ಕಲಬುರಗಿ: ಶಿಕ್ಷಕಿಯೊಬ್ಬರು ಚಾಲನೆ ಮಾಡುತ್ತಿದ್ದ ಕಾರು ಎತ್ತಿನ ಬಂಡಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ಎತ್ತುಗಳು ಸ್ಥಳದಲ್ಲೇ ಸಾವಿಗೀಡಾದ ಘಟನೆ ತಾಲೂಕಿನ ಕೋಡ್ಲಿ ಗ್ರಾಮದ ಬಳಿ ಸೋಮವಾರ ಬೆಳಗ್ಗೆ 10.30ರ ಸುಮಾರಿಗೆ ನಡೆದಿದೆ. ಕಲಬುರಗಿಯಿಂದ ಕಾರು ಸುಲೇಪೇಟ ಕಡೆಗೆ ಹೊರಟಿತ್ತು. ಈ ಕಾರಿನಲ್ಲಿ ಓರ್ವ ಬಾಲಕ ಸೇರಿದಂತೆ ಮೂವರು ಶಿಕ್ಷಕಿಯರು ಇದ್ದರು. ಈ ಶಿಕ್ಷಕಿಯರು ನಿತ್ಯ ಕಲಬುರಗಿ-ಸುಲೇಪೇಟ ಮಧ್ಯೆ ಪ್ರಯಾಣಿಸುತ್ತಾರೆ. ಇಂದು ಬೆಳಗ್ಗೆ ಕಾರಿನಲ್ಲಿ ಹೊರಟಿದ್ದಾಗ ಕೋಡ್ಲಿ ಸಮೀಪದ ರಾಜ್ಯ ಹೆದ್ದಾರಿ 32ರ ಮೇಲೆ ಸ್ವಿಫ್ಟ್ ಕಾರು ರಭಸವಾಗಿ ಎತ್ತಿನ ಬಂಡಿಗೆ ಡಿಕ್ಕಿ ಹೊಡೆದಿದೆ. ಹೀಗಾಗಿ ಎರಡೂ ಎತ್ತುಗಳು ತಕ್ಷಣ ಸಾವನ್ನಪ್ಪಿವೆ. ಸಾವ್ನಪ್ಪಿರುವ ಎತ್ತುಗಳು ಗ್ರಾಮದ ತಮ್ಮಣ್ಣ ಪೂಜಾರಿ ಎಂಬ ರೈತರಿಗೆ ಸೇರಿದವುಗಳಾಗಿದ್ದು, ಎತ್ತಿನ ಬಂಡಿಯಲ್ಲಿದ್ದ ವ್ಯಕ್ತಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಗಾಯಗೊಂಡಿರುವ ಶಿಕ್ಷಕಿಯರನ್ನು ಆಂಬ್ಯುಲೆನ್ಸ್ ಮೂಲಕ ತಕ್ಷಣ ಕಾಳಗಿ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ರಟಕಲ್ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಪ್ರಕರಣ ಇನ್ನೂ ದಾಖಲಾಗಿಲ್ಲ.
from India & World News in Kannada | VK Polls https://ift.tt/2QlSuAg