ಹೊಸದಿಲ್ಲಿ: ಪರ ಇನ್ನು ಹಲವು ವರ್ಷಗಳ ಕಾಲ ಆಡುವ ಸಾಮರ್ಥ್ಯ ಹೊಂದಿರುವಾಗಲೇ ಸ್ಫೋಟಕ ಬ್ಯಾಟ್ಸ್‌ಮನ್ ಹಠಾತ್ ನಿವೃತ್ತಿ ಘೋಷಿಸಿದ್ದು ಬಹುತೇಕರಿಗೆ ಅಚ್ಚರಿ ತಂದೊಡ್ಡಿತ್ತು. ಭಾರತದ ಮಾಜಿ ವೇಗಿ ರುದ್ರ ಪ್ರತಾಪ್ ಸಿಂಗ್ ಈ ಬಗ್ಗೆ ಮಾತನಾಡಿದ್ದು, ರೈನಾ ನಿರ್ಧಾರ ತಮಗೂ ಅಚ್ಚರಿ ತಂದೊಡ್ಡಿದೆ ಎಂದು ಹೇಳಿಕೊಂಡಿದ್ದಾರೆ. ರೈನಾ ಜೊತೆಗೆ ಅತಿ ಹೆಚ್ಚು ಕ್ರಿಕೆಟ್ ಆಡಿದ ಅನುಭವ ಆರ್‌ಪಿ ಸಿಂಗ್ ಅವರದ್ದು. ಕಿರಿಯರ ಕ್ರಿಕೆಟ್, 19 ವರ್ಷದೊಳಗಿನವರ ಕ್ರಿಕೆಟ್, ಉತ್ತರ ಪ್ರದೇಶ ಪರ ರಣಜಿ ಟ್ರೋಫಿ ನಂತರ ಭಾರತ ತಂಡದಲ್ಲೂ ಸ್ಟೈಲಿಷ್ ಲೆಫ್ಟ್ ಹ್ಯಾಂಡರ್‌ನ ಸಹ ಆಟಗಾರನಾಗಿ ಆಡಿದ್ದಾರೆ. "ಕಿರಿಯರ ಕ್ರಿಕೆಟ್‌ನಿಂದಲೂ ನಾನು ರೈನಾ ಜೊತೆಗೆ ಸಾಕಷ್ಟು ಆಟವಾಡಿದ್ದೇನೆ. ಇದೀಗ ರೈನಾ ಅವರ ನಿವೃತ್ತಿ ಬಗ್ಗೆ ಮಾತನಾಡುವುದಾದರೆ ಬಹುತೇಕರು ಬಹಳ ಬೇಗ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುತ್ತಿದ್ದಾರೆ. ಏಕೆಂದರೆ ರೈನಾ ಅವರ ಫಿಟ್ನೆಸ್ ಅದ್ಭುತವಾಗಿದ್ದು, ಅವರಿಂದ ಭಾರತ ತಂಡಕ್ಕೆ ಕಮ್‌ಬ್ಯಾಕ್ ಸಾಧ್ಯ ಎಂದು ನಂಬಿದ್ದರು. ಆದರೆ, ಟೀಮ್ ಇಂಡಿಯಾ ಪರ ಮರಳಿ ಆಡುವುದು ಸಾಧ್ಯವಿಲ್ಲ ಎಂಬುದನ್ನು ಅರಿತೇ ಅವರು ನಿವೃತ್ತಿಯ ಧೃಡ ಸಂಕಲ್ಪ ಮಾಡಿದ್ದರು ಎಂದನಿಸುತ್ತದೆ," ಎಂದು ಆರ್‌ಪಿ ಸಿಂಗ್ ಹೇಳಿದ್ದಾರೆ. ಆಗಸ್ಟ್ 15ರಂದು 74ನೇ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದಂತೆಯೇ ಅವರ ಬೆನ್ನಲ್ಲೇ 33 ವರ್ಷದ ರೈನಾ ಕೂಡ ಟೀಮ್ ಇಂಡಿಯಾ ವೃತ್ತಿಬದುಕಿಗೆ ವಿದಾಯ ಹೇಳಿದ್ದರು. ಭಾರತ ತಂಡದಲ್ಲಿ ರೈನಾ ಅವಕಾಶ ಕಳೆದುಕೊಂಡರೂ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅವರ ಖದರ್ ಜೋರಾಗಿಯೇ ಇದೆ. ಐಪಿಎಲ್ ಇತಿಹಾಸದಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ರನ್‌ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ರೈನಾ, 5368 ರನ್‌ಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಅಲ್ಲದೆ ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು (193) ಆಡಿದ ಕೀರ್ತಿ ಅವರದ್ದು. ಆದರೆ, 2018ರ ಬಳಿಕ ಅವರಿಗೆ ಟೀಮ್ ಇಂಡಿಯಾದಲ್ಲಿ ಅವಕಾಶ ಸಿಕ್ಕಿಲ್ಲ. ಕಳಪೆ ಫಾರ್ಮ್ ಮತ್ತು ಗಾಯಗಳ ಸಮಸ್ಯೆ ಕಾರಣ ಅವರು ತಂಡದಿಂದ ಹೊರಬಿದ್ದಿದ್ದರು. ಇನ್ನು ಟೀಮ್ ಇಂಡಿಯಾಗೆ ರೈನಾ ನಿವೃತ್ತಿಯಿಂದ ಹೊರಬಂದು ಮರಳಿ ಆಡಬೇಕಾದರೆ ಯುಎಇನಲ್ಲಿ ನಡೆಯಲಿರುವ ಐಪಿಎಲ್ 2020 ಟೂರ್ನಿಯಲ್ಲಿ ಅವರು ರನ್ ಹೊಳೆಯನ್ನು ಹರಿಸಬೇಕು ಎಂದು ಆರ್‌ಪಿ ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ. "ಯಾರಿಗೆಗೊತ್ತು! ಮುಂದಿನ ಐಪಿಎಲ್ ಟೂರ್ನಿಯಲ್ಲಿ ಅವರೇನಾದರೂ ತಂಡದ ಪರ 1000 ರನ್‌ಗಳನ್ನು ಗಳಿಸಿ ಮರಳಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಬೇಕೆಂದು ನಿರ್ಧರಿಸಿದರೂ ನಿರ್ಧರಿಸಬಹುದು. ಆದರೆ, ನೀವು ನಿವೃತ್ತಿಯಂತಹ ಕಠಿಣ ನಿರ್ಧಾರ ತೆಗೆದುಕೊಂಡಾಗ ಆ ಬಗ್ಗೆ ಬಹಳ ಯೋಚಿಸಿರುತ್ತೀರಿ. ಇನ್ನು ಯುವರಾಜ್ ಸಿಂಗ್ ಅವರಂತೆ ಕೆನಡಾ ಹಾಗೂ ಮತ್ತಿತರ ದೇಶಗಳಲ್ಲಿನ ಟಿ20 ಲೀಗ್ ಟೂರ್ನಿಗಳಲ್ಲಿಯೂ ಅವರು ಆಡಬಹುದು," ಎಂದಿದ್ದಾರೆ. "ನನಗೆ ಅಚ್ಚರಿ ತಂದೊಡ್ಡಿದ ಸಂಗತಿ ಏನೆಂದರೆ, ಅವರ ಹಠಾತ್ ನಿವೃತ್ತಿ ನಿರ್ಧಾರ. ಏಕೆಂದರೆ ಕೆಲ ದಿನಗಳ ಹಿಂದಷ್ಟೇ ಅವರು ಟೆಸ್ಟ್ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡುವ ಕುರಿತಾಗಿ ಮಾತನಾಡಿದ್ದರು. ಇರ್ಫಾನ್ ಪಠಾಣ್ ಜೊತೆಗೆ ಆನ್‌ಲೈನ್ ಚಾಟ್ ನಡೆಸುವ ವೇಳೆ ಅವರು ಈ ಮಾತನ್ನು ಹೇಳಿದ್ದರು," ಎಂದು ಆರ್‌ಪಿ ಸಿಂಗ್ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2CUSzru