ನವದೆಹಲಿ: ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುತ್ತಿರುವ ಕಾರ್ಯಕಾರಿಣಿ ಸಭೆಯಲ್ಲಿ, ಪಕ್ಷದ ಅಧ್ಯಕ್ಷ ಸ್ಥಾನದ ಕುರಿತು ಬರೆಯಲಾಗಿದ್ದ ಪತ್ರದ ಕುರಿತು ಅವರಾಡಿದ ಮಾತೊಂದು ಹಿರಿಯ ನಾಯಕರನ್ನು ಕೆರಳಿಸಿದೆ. ಬಿಜೆಪಿ ಜೊತೆ ಶಾಮೀಲಾಗಿ ಕೆಲವರು ಪಕ್ಷದ ಅಧ್ಯಕ್ಷ ಸ್ಥಾನದ ಕುರಿತು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ ಎಂದು ರಾಹುಲ್ ಗಾಂಧಿ ಗಂಭಿರ ಆರೋಪ ಮಾಡಿದ್ದಾರೆ. ಸೋನಿಯಾ ಗಾಂಧಿ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆ ಸೇರಿದಾಗಲೇ ಉದ್ದೇಶಪೂರ್ವಕಾಗಿ ಅಧ್ಯಕ್ಷ ಸ್ಥಾನ ಬದಲಿಸುವ ಕುರಿತು ಕೆಲವರು ಪತ್ರ ಬರೆದಿದ್ದಾರೆ. ಪಕ್ಷದ ಕೆಲವು ನಾಯಕರು ಬಿಜೆಪಿ ಜೊತೆ ಶಾಮೀಲಾಗಿದ್ದಾರೆ ಎಂದು ರಾಹುಲ್ ಹರಿಹಾಯ್ದಿದ್ದಾರೆ. ಅಲ್ಲದೇ ರಾಜಸ್ಥಾನ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲೇ ಈ ಕುರಿತು ವಿವಾದ ಸೃಷ್ಟಿಸಲು ತಂತ್ರ ಹೆಣೆಯಲಾಗಿದೆ ಎಂದೂ ರಾಹುಲ್ ಕಿಡಿಕಾರಿದ್ದಾರೆ. ಕೆಂಡಾಮಂಡಲ: ಇನ್ನು ರಾಹುಲ್ ಗಾಂಧಿ ಆರೋಪಕ್ಕೆ ಕೆರಳಿ ಕೆಂಡಾಮಂಡಲವಾಗಿರುವ ಹಿರಿಯ ನಾಯಕ ಕಪಿಲ್ ಸಿಬಲ್, ಕಳೆದ 30 ವರ್ಷಗಳಿಂದ ಪಕ್ಷಕ್ಕಾಗಿ ಪ್ರಾಮಾಣಿಕತೆಯಿಂದ ದುಡಿದವರಿಗೆ ರಾಹುಲ್ ಅಪಮಾನ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದವರ ಪೈಕಿ ಕಪಿಲ್ ಸಿಬಲ್ ಕೂಡ ಒಬ್ಬರಾಗಿದ್ದು, ರಾಹುಲ್ ಗಾಂಧಿ ಆರೋಪವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ರಾಜಸ್ಥಾನ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಸುಪ್ರೀಂಕೋರ್ಟ್ನಲ್ಲಿ ಪಕ್ಷದ ಪರವಾಗಿ ಯಶಸ್ವಿಯಾಗಿ ಹೋರಾಡಿದ್ದೇವೆ. ಮಣಿಪುರದಲ್ಲಿ ಪಕ್ಷ ಅಧಿಕಾರ ಕಳೆದುಕೊಳ್ಳಬಾರದು ಎಂದು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಕಳೆದ 30 ವರ್ಷಗಳಲ್ಲಿ ಬಿಜೆಪಿಗೆ ಅನುಕೂಲವಾಗುವಂತ ಒಂದೇ ಒಂದು ಮಾತನ್ನೂ ನಾವು ಆಡಿಲ್ಲ. ಆದರೂ ರಾಹುಲ್ ನಮ್ಮ ಮೇಲೆ ಗಂಭೀರ ಆರೋಪ ಮಾಡಿದ್ದಾರೆ ಎಂದು ಕಪಿಲ್ ಸಿಬಲ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಒಟ್ಟಿನಲ್ಲಿ ಈ ಬಾರಿಯ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಹಿರಿಯ ಹಾಗೂ ಕಿರಿಯ ನಾಯಕರ ನಡುವೆ ತೀವ್ರ ಜಟಾಪಟಿ ನಡೆದಿದ್ದು, ಇವರ ನಡುವೆ ಮತ್ತಷ್ಟು ಬಿರುಕು ಮೂಡಿರುವುದು ಸ್ಪಷ್ಟವಾಗಿ ಗೋಚರವಾಗಿದೆ.
from India & World News in Kannada | VK Polls https://ift.tt/3lbcq6Y