ನವದೆಹಲಿ: ವಿಡಿಯೋ ಕಾನ್ಫರೆನ್ಸ್ ಮೂಲಕ ಮಹತ್ವದ ಕಾರ್ಯಕಾರಿಣಿ ಸಬೆ ಆರಂಭವಾಗಿದ್ದು, ಪಕ್ಷದ ಅಧ್ಯಕ್ಷರನ್ನು ಬದಲಿಸುವ ಪ್ರಕ್ರಿಯೆ ಆರಂಭಿಸುವಂತೆ ನಾಯಕರಲ್ಲಿ ಮನವಿ ಮಾಡಿದ್ದಾರೆ. ಪಕ್ಷಕ್ಕೆ ಖಾಯಂ ಅಧ್ಯಕ್ಷರ ಅವಶ್ಯಕತೆಯಿದ್ದು, ಈ ಕುರಿತು ಹಲವು ನಾಯಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಾವು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ಬಯಸಿರುವುದಾಗಿ ಸೋನಿಯಾ ಸ್ಪಷ್ಟಪಡಿಸಿದ್ದಾರೆ. ಪಕ್ಷಕ್ಕೆ ನೂತನ ಹಾಗೂ ಖಾಯಂ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಆರಂಭವಾಗಬೇಕಿದ್ದು, ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವಂತೆ ಸೋನಿಯಾ ಗಾಂಧಿ ಹಿರಿಯ ನಾಯಕರಿಗೆ ಸೂಚನೆ ನೀಡಿದ್ದಾರೆ. ಆದರೆ ಸಭೆಯಲ್ಲಿ ಹಾಜರಿದ್ದ ಬಹುತೇಕ ಹಿರಿಯ ನಾಯಕರು ಸೋನಿಯಾ ಗಾಂಧಿ ಅವರೇ ಪಕ್ಷದ ಅಧ್ಯಕ್ಷೆಯಾಗಿ ಮುಂದುವರೆಯಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಮುಖವಾಗಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಸದ್ಯದ ಪರಿಸ್ಥಿತಿಯಲ್ಲಿ ಅಧ್ಯಕ್ಷ ಸ್ಥಾನವನ್ನು ಬದಲಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ. ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಮತ್ತೋರ್ವ ಹಿರಿಯ ನಾಯಕ ಎಕೆ ಆಂಟೋನಿ, ಸದ್ಯದ ರಾಜಕೀಯ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಸೋನಿಯಾ ಗಾಂಧಿ ಅವರೇ ಅಧ್ಯಕ್ಷರಾಗಿ ಮುಂದುವರೆಯಬೇಕು ಎಂದು ಆಗ್ರಹಿಸಿದ್ದಾರೆ. ಇದೇ ವೇಳೆ ಅಧ್ಯಕ್ಷ ಸ್ಥಾನ ಬದಲಿಸುವ ಕುರಿತು ಪಕ್ಷದ ಕೆಲವು ನಾಯಕರು ಬರೆದಿರುವ ಪತ್ರಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಯಲ್ಲಿದ್ದಾಗಲೇ ಏಕೆ ಈ ಪತ್ರ ಬರೆಯಲಾಯಿತು ಎಂದು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಅಧ್ಯಕ್ಷ ಸ್ಥಾನ ಬದಲಿಸುವ ಕುರಿತು ಬಿಸಿಬಿಸಿ ಚರ್ಚೆ ನಡೆಯುತ್ತಿದ್ದು, ಅಂತಿಮ ನಿರ್ಣಯದ ಮೇಲೆ ಎಲ್ಲರೂ ಚಿತ್ತ ಹರಿಸಿದ್ದಾರೆ.
from India & World News in Kannada | VK Polls https://ift.tt/3gmwHTt