ಲಂಡನ್: ಇಂಗ್ಲೆಂಡ್ ತಂಡದ ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟ್ಸ್‌ಮನ್ ಕೆವಿನ್ ಪೀಟರ್ಸನ್, ತಮ್ಮ ಬ್ಯಾಟಿಂಗ್ ಮೇಲೆ ಭಾರತ ತಂಡದ ದಿಗ್ಗಜ ರಾಹುಲ್ ದ್ರಾವಿಡ್ ಬೀರಿದ್ದ ಬಹುದೊಡ್ಡ ಪ್ರಭಾವವನ್ನು ಇದೀಗ ಹೇಳಿಕೊಂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ವೀರೇಂದ್ರ ಸೆಹ್ವಾಗ್ ಮತ್ತು ರಾಹುಲ್ ದ್ರಾವಿಡ್ ಅವರಂತಹ ದಿಗ್ಗಜರೊಂದಿಗೆ ಆಡಿದ ಅನುಭವ ಹಂಚಿಕೊಂಡಿರುವ ಪೀಟರ್ಸನ್, ಈ ಸಂದರ್ಭದಲ್ಲಿ ಸ್ಪಿನ್ ಬೌಲರ್‌ಗಳನ್ನು ಎದುರಿಸುವ ತಂತ್ರವನ್ನು ರಾಹುಲ್ ಅವರಿಂದ ಕಲಿತುಕೊಂಡಿದ್ದಾಗಿ ಬಹಿರಂಗ ಪಡಿಸಿದ್ದಾರೆ. ಆರೂವರೆ ಅಡಿ ಎತ್ತರದ ದೈತ್ಯ ಬ್ಯಾಟ್ಸ್‌ಮನ್ ಐಪಿಎಲ್‌ನಲ್ಲಿ ಅತಿ ಹೆಚ್ಚು ಮೌಲ್ಯ ಪಡೆದ ಇಂಗ್ಲೆಂಡ್ ಆಟಗಾರ ಎಂಬ ಕೀರ್ತಿ ಹೊಂದಿದ್ದು, ಡೆಕನ್ ಚಾರ್ಜರ್ಸ್, ಡೆಲ್ಲಿ ಡೇರ್‌ಡೆವಿಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ಪರವಾಗಿ ಆಡಿದ ಅನುಭವ ಹೊಂದಿದ್ದಾರೆ. "ರಾಹುಲ್ ದ್ರಾವಿಡ್ ನನಗೊಂದು ಸುಂದರ ಇ-ಮೇಲ್ ಬರೆದಿದ್ದರು. ಅದರಲ್ಲಿ ಸ್ಪಿನ್ ಬೌಲರ್‌ಗಳ ಎದುರು ಬ್ಯಾಟಿಂಗ್ ಮಾಡುವ ತಂತ್ರವನ್ನು ಹೇಳಿಕೊಟ್ಟಿದ್ದರು. ಅದನ್ನು ರೂಢಿಸಿಕೊಂಡ ಬಳಿಕ ನನ್ನ ವೃತ್ತಿಬದುಕಿನಲ್ಲಿ ಅಮೋಘ ಬದಲಾವಣೆ ಲಭ್ಯವಾಗಿ ಯಶಸ್ಸಿನ ಹಾದಿ ಕಂಡುಕೊಳ್ಳಲು ಸಾಧ್ಯವಾಯಿತು," ಎಂದು ಇಂಗ್ಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್ ಹೇಳಿದ್ದಾರೆ. "ದ್ರಾವಿಡ್ ನೀಡಿದ್ದ ಪ್ರಮುಖ ಸಲಹೆ ಎಂದರೆ, ಚೆಂಡನ್ನು ಬೌಲರ್ ಎಸೆದ ಬಳಿಕ ಯಾವ ಅಳತೆಯಲ್ಲಿ ಅದು ಪಿಚ್ ಆಗುತ್ತದೆ ಎಂಬುದನ್ನು ಮೊದಲು ಅಂದಾಜಿಸಿ ಎಂದು ಹೇಳಿದ್ದರು," ಎಂದು ಸ್ಕೈ ಸ್ಪೋರ್ಟ್ಸ್‌ಗೆ ನೀಡಿದ ವಿಶೇಷ ಸಂದರ್ಶನದ ವೇಳೆ 40 ವರ್ಷದ ಮಾಜಿ ಕ್ರಿಕೆಟರ್ ಹೇಳಿಕೊಂಡಿದ್ದಾರೆ. 2004ರಲ್ಲಿ ಇಂಗ್ಲೆಂಡ್ ತಂಡಕ್ಕೆ ಪದಾರ್ಪಣೆ ಮಾಡಿದ್ದ ದಕ್ಷಿಣ ಆಫ್ರಿಕಾ ಸಂಜಾತ ಆಟಗಾರ 2014ರಲ್ಲಿ ತಮ್ಮ ವೃತ್ತಿ ಬದುಕಿನಲ್ಲಿ ಇನ್ನಷ್ಟು ಆಟ ಬಾಕಿಯಿದ್ದರೂ ಕೂಡ ಮಂಡಳಿ, ನಾಯಕ ಮತ್ತು ಸಹ ಆಟಗಾರರ ಜೊತೆಗಿನ ಭಿನ್ನಭಿಪ್ರಾಯ ಕಾರಣ ತಂಡದಿಂದ ಹೊರಬಿದ್ದಿದ್ದರು. 104 ಟೆಸ್ಟ್ ಕ್ರಿಕೆಟ್ ಪಂದ್ಯಗಳನ್ನು ಆಡಿರುವ ಪೀಟರ್ಸನ್ 47.28ರ ಸರಾಸರಿಯಲ್ಲಿ 8181 ರನ್‌ಗಳನ್ನು ಬಾರಿಸಿದ್ದಾರೆ. ಏಕದಿನ ಕ್ರಿಕೆಟ್ ಮಾದರಿಯಲ್ಲೂ ಅಪಾಯಕಾರಿ ಬ್ಯಾಟ್ಸ್‌ಮನ್ ಆಗಿದ್ದ ಕೆಪಿ 40.73ರ ಬ್ಯಾಟಿಂಗ್ ಸರಾಸರಿಯಲ್ಲಿ 4440 ರನ್‌ಗಳನ್ನು ಗಳಿಸಿದ್ದಾರೆ. ಇದೇ ವೇಳೆ ತಮ್ಮ ಜನಪ್ರಿಯ ಸ್ವಿಚ್ ಹಿಟ್ ಶಾಟ್ ಆಡಲು ಬಾಲ್ಯದಲ್ಲಿ ಆಡಿದ್ದ ಸ್ಕ್ವಾಷ್ ಆಟದ ಪರಿಣಾಮ ಸುಲಭವಾಯಿತು ಎಂಬ ರಹಸ್ಯವನ್ನು ಬಹಿರಂಗ ಪಡಿಸಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2EISjfJ