ಬೆಂಗಳೂರು: ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಡಾ. ನಾಗೇಂದ್ರ ಆತ್ಮಹತ್ಯೆ ಪ್ರಕರಣದ ಸಮಗ್ರ ತನಿಖೆ ನಡೆಸಿ ಏಳು ದಿನಗಳ ಒಳಗಾಗಿ ವರದಿಯನ್ನು ನೀಡಲು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಮೇಲಾಧಿಕಾರಿಗಳ ಒತ್ತಡ ಹಿನ್ನೆಲೆಯಲ್ಲಿ ಡಾ. ನಾಗೇಂದ್ರ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಈ ಘಟನೆಯ ಹಿನ್ನೆಲೆಯಲ್ಲಿ ವೈದ್ಯಕೀಯ ಸಿಬ್ಬಂದಿಯಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ನಿಟ್ಟಿನಲ್ಲಿ ಘಟನೆಯ ಸಂಬಂಧವಾಗಿ ನಿಷ್ಪಕ್ಷಪಾತ ಹಾಗೂ ಸಮಗ್ರವಾಗಿ ತನಿಖೆ ನಡೆಸಿ ಏಳು ದಿನಗಳ ಒಳಗಾಗಿ ವರದಿಯನ್ನು ನೀಡಲು ಪ್ರಾದೇಶಿಕ ಆಯುಕ್ತರ ನೇಮಕ ಮಾಡಲು ಸಿಎಂ ಸೂಚನೆ ನೀಡಿದ್ದಾರೆ. ಅಲ್ಲದೆ ಮೃತರ ಕುಟುಂಬಕ್ಕೆ ನೀಡಲಾಗಿದ್ದ ಪರಿಹಾರ ಮೊತ್ತವನ್ನು ಹೆಚ್ಚಳ ಮಾಡಲಾಗಿದ್ದು ಒಟ್ಟು 50 ಲಕ್ಷ ಪರಿಹಾರವನ್ನು ಘೋಷಣೆ ಮಾಡಲಾಗಿದೆ. ಜೊತೆಗೆ ಮೃತರ ಕುಟುಂಬದ ಅವಲಂಬಿತರಿಗೆ ಅನುಕಂಪದ ಆಧಾರದ ನೇಮಕಾತಿಯನ್ನು ನೀಡುವಂತೆ ಸೂಚನೆ ನೀಡಲಾಗಿದೆ. ಸರ್ಕಾರದಿಂದ ದೊರೆಯಬಹುದಾದ ಇನ್ನಿತರ ಸೌಲಭ್ಯಗಳನ್ನು ವಿಳಂಬ ಮಾಡದೆ ಪಾವತಿಸುವಂತೆ ಬಿಎಸ್ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಡಾ. ನಾಗೇಂದ್ರ ಅವರು ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸೆತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೋವಿಡ್ ಕರ್ತವ್ಯದಲ್ಲಿರುವ ಸರ್ಕಾರಿ ನೌಕರರು ಯಾವುದೇ ಒತ್ತಡಗಳಿದ್ದಲ್ಲಿ ಧೃತಿಗೆಡುವ ಅವಶ್ಯಕತೆ ಇಲ್ಲ. ಸರ್ಕಾರ ನಿಮ್ಮ ಜೊತೆ ಇದೆ. ನಿಮ್ಮ ಯಾವುದೇ ಸಮಸ್ಯೆ ಇದ್ದರೆ ಸಂಬಂಧಿಸಿದ ಮೇಲಾಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕು ಎಂದು ಸಿಎಂ ಮನವಿ ಮಾಡಿಕೊಂಡಿದ್ದಾರೆ.
from India & World News in Kannada | VK Polls https://ift.tt/3giE6TG