ಧೋನಿ ರೀತಿಯಲ್ಲಿ ಡಿಆರ್‌ಎಸ್ ಮಾಸ್ಟರ್ ಆಗಲು ಹೋಗಿ ಟೀಕೆಗೆ ಗುರಿಯಾದ ಪಂತ್

ಹೊಸದಿಲ್ಲಿ: ಪ್ರವಾಸಿ ಬಾಂಗ್ಲಾದೇಶ ವಿರುದ್ಧ ನಡೆದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಭಾರತ ಸೋಲಿಗೆ ಶರಣಾಗಿದೆ. ಇದರೊಂದಿಗೆ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 0-1ರ ಅಂತರದ ಹಿನ್ನಡೆಗೊಳಗಾಗಿದೆ. ಇದೀಗ ಸರಣಿ ವಶಪಡಿಸಿಕೊಳ್ಳಲು ಮುಂದಿನ ಎರಡು ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಈ ಮಧ್ಯೆ ಪಂದ್ಯದಲ್ಲಿ ಮಾಜಿ ನಾಯಕ ತರಹನೇ ಡಿಆರ್‌ಎಸ್ ಮಾಸ್ಟರ್ ಆಗಲು ಹೊರಟಿರುವ ವಿಕೆಟ್ ಕೀಪರ್ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ವಿಕೆಟ್ ಹಿಂದುಗಡೆ ಡಿಆರ್‌ಎಸ್ ನಿಖರತೆಯಲ್ಲಿ ಧೋನಿ ಪ್ರಾವೀಣ್ಯತೆ ಮೆರೆದಿದ್ದಾರೆ. ಧೋನಿ ಮನವಿ ಮಾಡಿದರೆ ಶೇ. 99ರಷ್ಟು ಬಾರಿ ಅದು ಔಟ್ ಆಗಿರುತ್ತದೆ. ಹಾಗಾಗಿ ಡಿಆರ್‌ಎಸ್ ಧೋನಿ ರಿವ್ಯೂ ಸಿಸ್ಟಂ ಎಂದೇ ಹೆಸರುವಾಸಿಯಾಗಿತ್ತು. ಪ್ರಸ್ತುತ ಯುವ ಆಟಗಾರರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಧೋನಿ ಕ್ರಿಕೆಟ್‌ನಿಂದ ದೂರವುಳಿದಿದ್ದಾರೆ. ಆದರೆ ಇದರ ಪ್ರಯೋಜನ ಪಡೆಯುವಲ್ಲಿ ರಿಷಬ್ ಪಂತ್ ವಿಫಲವಾಗಿದ್ದಾರೆ. ಒಂದೇ ಓವರ್‌ನಲ್ಲಿ ಮೂರು ಬಾರಿ ಪಂತ್ ಡಿಆರ್‌ಎಸ್ ಎಡವಟ್ಟು ಮಾಡಿಕೊಂಡರು. ಯುಜ್ವೇಂದ್ರ ಚಹಲ್ ಎಸೆದ ಇನ್ನಿಂಗ್ಸ್‌ನಲ್ಲಿ 10ನೇ ಓವರ್‌ನಲ್ಲಿ ಎರಡು ಬಾರಿ ಎಲ್‌ಬಿಡಬ್ಲ್ಯುಗಾಗಿ ಡಿಆರ್‌ಎಸ್ ಮನವಿ ಪಡೆಯುವ ಅವಕಾಶವಿದ್ದರೂ ರಿಷಬ್ ಪಂತ್ ತಪ್ಪಿನಿಂದಾಗಿ ಭಾರತ ಅವಕಾಶ ಮಿಸ್ ಮಾಡಿಕೊಂಡಿತು. ಆದರೆ ಅದೇ ಓವರ್‌ನ ಅಂತಿಮ ಎಸೆತದಲ್ಲಿ ಬ್ಯಾಟ್ ತಗುಲದಿದ್ದರೂ ಮನವಿ ಮಾಡುವ ಮೂಲಕ ಮಹತ್ವದ ಡಿಆರ್‌ಎಸ್ ಕೈಚೆಲ್ಲಿತ್ತು. ಈ ಸಂದರ್ಭದಲ್ಲಿ ನಾಯಕ ರೋಹಿತ್ ಶರ್ಮಾ ಅಸಮಾಧಾನಗೊಂಡರೂ ನಗು ಮುಖದ ಮೂಲಕ ತಾಳ್ಮೆಯನ್ನು ಮೆರೆದರು. ಪ್ರಸ್ತುತ ಪಂತ್ ಮೇಲೆ ವ್ಯಾಪಕ ಟ್ರೋಲ್‌ಗಳು ಹರಿದಾಡುತ್ತಿದೆ. ನಿಮ್ಮಿಂದ ಧೋನಿ ಆಗಲು ಸಾಧ್ಯವಿಲ್ಲ ಎಂದು ನೆಟ್ಟಿಗರು ಚಾಟಿಯೇಟು ಬೀಸಿದ್ದಾರೆ. ಪಂತ್‌ಗೆ ಬೇಕಾದಷ್ಟು ಅವಕಾಶ ನೀಡಿದರೂ ಅದರ ಪ್ರಯೋಜನ ಪಡೆಯುವಲ್ಲಿ ವಿಫಲವಾಗಿದ್ದಾರೆ. ಆಯ್ಕೆ ಸಮಿತಿ ಬೆಂಬಲದ ಹೊರತಾಗಿಯೂ ಕಳೆದ ಕೆಲವು ಸರಣಿಗಳಲ್ಲಿ ಸತತ ವೈಫಲ್ಯಕ್ಕೊಳಗಾಗಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಡಿಆರ್‌ಎಸ್ ಎಡವಟ್ಟು ಮಾಡುವ ಮೂಲಕ ವಿಮರ್ಶೆಗೊಳಗಾಗಿದ್ದಾರೆ. ಇದೀಗ ದ್ವಿತೀಯ ಪಂದ್ಯದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವರೇ ಅಥವಾ ಯಂಗ್ ಸಂಜು ಸ್ಯಾಮ್ಸನ್‌ಗೆ ಮಣೆ ಹಾಕಲಾಗುವುದೇ ಎಂಬುದನ್ನು ಕಾದು ನೋಡಬೇಕಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2NyAIrC

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...