ಹೊಸದಿಲ್ಲಿ: ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಗಾಂಧಿ ಕುಟುಂಬದ ಎಸ್‌ಪಿಜಿ ಭದ್ರತೆ ಹಿಂತೆಗೆದುಕೊಂಡಿರುವ ಬಗ್ಗೆ ಎದ್ದಿರುವ ವಿವಾದದ ಬಗ್ಗೆ ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಪ್ರತಿಕ್ರಿಯೆ ನೀಡಿದ್ದಾರೆ. ಇದರ ಹಿಂದೆ ಯಾವುದೇ ರಾಜಕೀಯ ದ್ವೇಷವಿಲ್ಲ ಎಂದೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ತಿಳಿಸಿದ್ದಾರೆ. ಎಸ್‌ಪಿಜಿ ತಿದ್ದುಪಡಿ ಮಸೂದೆ ಮೇಲಿನ ಚರ್ಚೆ ವೇಳೆ ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಗೃಹ ಸಚಿವರು, ಎಸ್‌ಪಿಜಿ ಭದ್ರತೆ ವೃತ್ತಿಪರ ಮೌಲ್ಯಮಾಪನಗಳ ಆಧಾರದ ಮೇಲೆ ಮಾಡಿದ ಭದ್ರತಾ ವ್ಯವಸ್ಥೆಗಳು ಅಷ್ಟೇ. ಇದರ ಹಿಂದೆ ಯಾವುದೇ ರಾಜಕೀಯ ದ್ವೇಷವಿಲ್ಲ ಎಂದು ಅಮಿತ್ ಶಾ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ಬೆದರಿಕೆ ಗ್ರಹಿಕೆಗಳು ಕಾಲಾನಂತರದಲ್ಲಿ ಬದಲಾಗುತ್ತವೆ. ಆದ್ದರಿಂದ ಭದ್ರತಾ ವ್ಯವಸ್ಥೆಯನ್ನು ಅದಕ್ಕೆ ತಕ್ಕಂತೆ ಬದಲಾಯಿಸಬೇಕು ಎಂದೂ ಅಮಿತ್ ಶಾ ತಿಳಿಸಿದ್ದಾರೆ. ಟಿಎಂಸಿಯ ಸುದೀಪ್ ಬಂಡೋಪಾಧ್ಯಾಯ ಕೇಳಿದ ಪ್ರಶ್ನೆಗೆ ಅಮಿತ್ ಶಾ ಈ ಉತ್ತರ ನೀಡಿದ್ದಾರೆ. ಇನ್ನು, ಎಸ್‌ಪಿಜಿ ತಿದ್ದುಪಡಿ ಮಸೂದೆಯನ್ನು ಧ್ವನಿ ಮತದ ಮೂಲಕ ಲೋಕಸಭೆಯಲ್ಲಿ ಅಂಗೀಕಾರ ಮಾಡಲಾಗಿದೆ. ಆದರೆ, ಮಸೂದೆ ಅಂಗೀಕಾರ ಖಂಡಿಸಿ ಹಾಗೂ ಗಾಂಧಿ ಕುಟುಂಬಕ್ಕೆ ಎಸ್‌ಪಿಜಿ ಭದ್ರತೆ ಹಿಂಪಡೆದಿರುವುದನ್ನು ಪ್ರತಿಭಟಿಸಿ ಸಂಸತ್ ಭವನದಿಂದ ಹೊರ ನಡೆದರು. ನಿರ್ದಿಷ್ಟ ಕುಟುಂಬಕ್ಕೆ ಎಸ್‌ಪಿಜಿ ವ್ಯಾಪ್ತಿಯನ್ನು ಮುಂದುವರೆಸಲು ಎಸ್‌ಪಿಜಿ ಕಾಯ್ದೆಯನ್ನು ಈ ಹಿಂದೆ ಪ್ರತಿ ಬಾರಿಯೂ ತಿದ್ದುಪಡಿ ಮಾಡಲಾಗಿದೆ ಎಂದೂ ಅಮಿತ್ ಶಾ ಕಾಂಗ್ರೆಸ್ ವಿರುದ್ಧ ತಿರುಗೇಟು ನೀಡಿದರು.
from India & World News in Kannada | VK Polls https://ift.tt/37I2xqD