ಹೊಸದಿಲ್ಲಿ: ಬಿಜೆಪಿ ಲೋಕಸಭಾ ಸದಸ್ಯೆ ರಾಷ್ಟ್ರಪಿತ ಕೊಲೆಗಾರ ನಾಥುರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದು ವಿವಾದಕ್ಕೆ ನಾಂದಿ ಹಾಡಿದ್ದಾರೆ. ಲೋಕಸಭೆಯಲ್ಲಿ ಚರ್ಚೆ ವೇಳೆ ಅವರು ಈ ಪ್ರಸ್ತಾಪ ಮಾಡಿದ್ದು, ಇದರಿಂದ ಆಕ್ರೋಶಗೊಂಡ ವಿರೋಧ ಪಕ್ಷಗಳು ತಕ್ಷಣವೇ ಪ್ರತಿಭಟನೆ ನಡೆಸಿದ ಬೆಳವಣಿಗೆಗೆ ಬುಧವಾರದ ಕಲಾಪ ಸಾಕ್ಷಿಯಾಯಿತು. ವಿಶೇಷ ಭದ್ರತಾ ಪಡೆ (ತಿದ್ದುಪಡಿ) ಮಸೂದೆ ಚರ್ಚೆ ವೇಳೆ ಡಿಎಂಕೆ ನಾಯಕ ಎ ರಾಜ, ಮಹಾತ್ಮಾ ಗಾಂಧಿಯನ್ನು ಕೊಂದಿದ್ದೇಕೆ ಎಂಬುದಾಗಿ ಗೋಡ್ಸೆ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸುತ್ತಿದ್ದರು. ಈ ವೇಳೆ ಮಧ್ಯ ಪ್ರವೇಶಿಸಿದ ಪ್ರಗ್ಯಾ ಸಿಂಗ್ ಠಾಕೂರ್, “ನೀವು ದೇಶಭಕ್ತರ ಉದಾಹರಣೆಯನ್ನು ನೀಡುವಂತಿಲ್ಲ,” ಎಂದು ಅಡ್ಡಿಪಡಿಸಿದರು. ಅಂತಿಮವಾಗಿ ಅವರನ್ನು ಹತ್ಯೆ ಮಾಡಲು ನಿರ್ಧರಿಸುವ ಮೊದಲು 32 ವರ್ಷಗಳ ಕಾಲ ಗಾಂಧಿಯ ವಿರುದ್ಧ ದ್ವೇಷ ಸಾಧಿಸಿದ್ದಾಗಿ ಗೊಡ್ಸೆ ಸ್ವತಃ ಒಪ್ಪಿಕೊಂಡಿದ್ದಾನೆ ಎಂದು ರಾಜಾ ಹೇಳಿದರು. ನಿರ್ದಿಷ್ಟ ಸಿದ್ಧಾಂತವನ್ನು ಗೋಡ್ಸೆ ನಂಬಿದ್ದರಿಂದ ಗಾಂಧಿಯನ್ನು ಕೊಂದ ಎಂದು ರಾಜಾ ವಿವರಿಸುತ್ತಿದ್ದರು. ಇದಕ್ಕೆ ಪ್ರಗ್ಯಾ ಠಾಕೂರ್ ಅಡ್ಡಿ ಪಡಿಸುತ್ತಿದ್ದಂತೆ ಕೆರಳಿದ ವಿರೋಧ ಪಕ್ಷಗಳು ತಕ್ಷಣವೇ ಪ್ರತಿಭಟಿಸಿದವು. ಇದರಿಂದ ಎಚ್ಚೆತ್ತ ಬಿಜೆಪಿ ನಾಯಕರು ಕುಳಿತುಕೊಳ್ಳುವಂತೆ ಪ್ರಗ್ಯಾ ಠಾಕೂರ್ಗೆ ಸೂಚಿಸಿದರು.
from India & World News in Kannada | VK Polls https://ift.tt/2OVcCIq