ಅಬುದಾಬಿ: ವೆಸ್ಟ್ ಇಂಡೀಸ್ ಸ್ಟಾರ್ ಆಲ್‌ರೌಂಡರ್ ಡ್ವೇನ್ ಬ್ರಾವೋ ನಾಯಕತ್ವದ ತಂಡ ಇಲ್ಲಿ ಮುಕ್ತಾಯವಾದ ಅಬುದಾಭಿ ಟಿ10 ಲೀಗ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಡೆಕನ್ ಗ್ಲಾಡಿಯೇಟರ್ಸ್ ವಿರುದ್ಧ ಎಂಟು ವಿಕೆಟ್‌ಗಳಿಂದ ಗೆದ್ದು ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಭಾನುವಾರ ಇಲ್ಲಿನ ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ಸ್‌ನಲ್ಲಿ ಯುವರಾಜ್ ಸಿಂಗ್, ಲಸಿತ್ ಮಲಿಂಗಾ ಕ್ರಿಸ್ ಲೀನ್ ಅವರನ್ನು ಒಳಗೊಂಡ ಮರಾಠ ಅರೇಬಿಯನ್ಸ್ ತಂಡ, ಎದುರಾಳಿ ಡೆಕ್ಕಾನ್ ಗ್ಲಾಡಿಯೇಟರ್ಸ್ ತಂಡವನ್ನು 10 ಓವರ್ ಗಳಿಗೆ 88 ರನ್ ಗಳಿಗೆ ನಿಯಂತ್ರಿಸಿತು. ಬಳಿಕ ಗುರಿ ಬೆನ್ನತ್ತಿದ ಅರೇಬಿಯನ್ಸ್ ತಂಡ 7.4 ಓವರ್‌ಗಳಲ್ಲಿ ಕೇವಲ ಎರಡು ವಿಕೆಟ್ ಕಳೆದುಕೊಂಡು 89 ರನ್ ಸಿಡಿಸಿ ಗೆಲುವಿನ ನಗೆ ಬೀರಿತು. ಅರೇಬಿಯನ್ಸ್ ಪರ ಅಬ್ಬರದ ಬ್ಯಾಟಿಂಗ್ ಮಾಡಿದ ವಿಕೆಟ್ ಕೀಪರ್ ಚಾಡ್ವಿಕ್ ವಾಲ್ಟನ್ ಕೇವಲ 26 ಎಸೆತಗಳಲ್ಲಿ 51 ರನ್ ಚಚ್ಚಿದರು. ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಮರಾಠ ಅರೇಬಿಯನ್ಸ್ ಟಿ10 ಲೀಗ್‌ನಲ್ಲಿ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಯುವರಾಜ್ ಮುಡಿಗೇರಿದ ವಿಶೇಷ ದಾಖಲೆಮರಾಠ ಅರೇಬಿಯನ್ಸ್ ಪರ ಆಡುವ ಮೂಲಕ ಟಿ10 ಲೀಗ್ ಮಾದರಿಗೆ ಪದಾರ್ಪಣೆ ಮಾಡಿದ ಭಾರತದ ಮಾಜಿ ಸ್ಟಾರ್ ಆಲ್‌ರೌಂಡರ್ , ಇದೀಗ ವಿಶ್ವದ ಯಾವೊಬ್ಬ ಕ್ರಿಕೆಟರ್ ಮಾಡದ ಅಪರೂಪದ ಸಾಧನೆಯೊಂದನ್ನು ಮಾಡಿದ್ದಾರೆ. ಭಾನುವಾರ ಮುಕ್ತಾಯಗೊಂಡ ಅಬುಧಾಬಿ ಟಿ10 ಲೀಗ್‌ನಲ್ಲಿ ಮರಾಠ ಅರೇಬಿಯನ್ಸ್ ತಂಡ ಚೊಚ್ಚಲ ಪ್ರಶದ್ತಿ ಗೆದ್ದಿದೆ. ಇದರೊಂದಿಗೆ ಯುವರಾಜ್ ಸಿಂಗ್, ಅಂಡರ್ 15 ವಿಶ್ವಕಪ್, ಅಂಡರ್ 19 ವಿಶ್ವಕಪ್, ಟಿ20 ಕ್ರಿಕೆಟ್ ವಿಶ್ವಕಪ್, ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ಐಪಿಎಲ್ ಹಾಗೂ ಟಿ10 ಲೀಗ್ ಎಲ್ಲರದಲ್ಲೂ ಚಾಂಪಿಯನ್ ತಂಡಗಳಲ್ಲಿ ಗುರುತಿಸಿಕೊಂಡ ವಿಶ್ವದ ಏಕಮಾತ್ರ ಕ್ರಿಕೆಟರ್ ಎಂಬ ವಿಶ್ವದಾಖಲೆ ತಮ್ಮದಾಗಿಸಿಕೊಂಡಿದ್ದಾರೆ. ಅಂದಹಾಗೆ ಟೂರ್ನಿಯಲ್ಲಿ ಮರಾಠ ತಂಡ ಪ್ರಶಸ್ತಿ ಗೆದ್ದರೂ, ಯುವರಾಜ್ ಸಿಂಗ್ ಅವರಿಂದ ಹೇಳಿಕೊಳ್ಳುವಂತಹ ಪ್ರದರ್ಶನವೇನೂ ಮೂಡಿಬರಲಿಲ್ಲ. ಇದಕ್ಕೂ ಮುನ್ನ ಕೆನಡಾ ಗ್ಲೋಬಲ್ ಟಿ20ಯಲ್ಲಿ ಆಡಿದ್ದ ಯುವಿ, ಸಿಕ್ಸರ್‌ಗಳ ಸುರಿಮಳೆ ಗೈದಿದ್ದರು. ಆದರೆ ಹೊಸ ಮಾದರಿಯ ಕ್ರಿಕೆಟ್ ಆಗಿರುವ ಟಿ10 ಲೀಗ್‌ನಲ್ಲಿ ಅದೇ ಛಾಪು ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಸಂಕ್ಷಿಪ್ತ ಸ್ಕೋರ್ ಡೆಕನ್ ಗ್ಲಾಡಿಯೇಟರ್ಸ್: 10 ಓವರ್‌ಗಳಿಗೆ 88/7 (ಆಸಿಫ್ ಖಾನ್ 25, ಭಾನುಕ ರಾಜಪಕ್ಸೆ 23; ಡ್ವೇನ್ ಬ್ರಾವೊ 16ಕ್ಕೆ2). ಮರಾಠ ಅರೇಬಿಯನ್ಸ್: 7.4 ಓವರ್‌ಗಳಿಗೆ 89/2 (ಚಾಡ್ವಿಕ್ ವಾಲ್ಟನ್ ಔಟಾಗದೆ 51, ಕ್ರಿಸ್ ಲಿನ್ 16; ಮಿಗೆಲ್ ಪ್ರೆಟೋರಿಯಸ್ 16 ಕ್ಕೆ 1).
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2DfahCz