ಬೆಂಗಳೂರು: ವೆಸ್ಟ್ ಇಂಡೀಸ್‌ನ ಮಾಜಿ ನಾಯಕ ಹಾಗೂ ಸ್ಟಾರ್ ಆಲ್‌ರೌಂಡರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರೂ, ವಿವಿಧ ಲೀಗ್‌ಗಳಲ್ಲಿ ತಮ್ಮ ಆಟ ಮುಂದುವರಿಸಿ ತಾವೊಬ್ಬ ಚಾಂಪಿಯನ್ ಆಟಗಾರ ಎಂಬುದನ್ನು ಸಾಬೀತು ಪಡಿಸುತ್ತಲೇ ಇದ್ದಾರೆ. ಇದೀಗ ತಮ್ಮ ನಾಯಕತ್ವದಲ್ಲಿ ಯುಎಇನಲ್ಲಿ ನಡೆದ ಅಬುಧಾಬಿ ಟಿ10 ಲೀಗ್‌ನಲ್ಲಿ ತಂಡಕ್ಕೆ ಚೊಚ್ಚಲ ಪ್ರಶಸ್ತಿ ಗೆದ್ದುಕೊಟ್ಟಿದ್ದಾರೆ. ಐಪಿಎಲ್‌ನಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿರುವ 36 ವರ್ಷದ ಆಲ್‌ರೌಂಡರ್ ತಮ್ಮ ಖಾತೆಗೆ ಮತ್ತೊಂದು ಟ್ರೋಫಿ ಸೇರ್ಪಡೆ ಮಾಡಿಕೊಂಡ ಸಂತಸದ ಸುದ್ದಿಯನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆ ಮೂಲಕ ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಆದರೆ, ಒಬ್ಬ ಅಭಿಮಾನಿ ಮಾತ್ರ ಬ್ರಾವೋ ಕಾಲೆಳೆಯುವ ಪ್ರಯತ್ನದಲ್ಲಿ ತಾನೇ ಪೇಚಿಗೆ ಸಿಲುಕಿದ್ದಾನೆ. ಪೂರ್ವಾಪರ ತಿಳಿಯದೇ ಮಾಡಲು ಪ್ರಯತ್ನಿಸಿ ಬ್ರಾವೋ ಕೈಲಿ ಮರಳಿ ಟ್ರೋಲ್‌ಗೆ ಒಳಗಾಗಿದ್ದಾನೆ. ಬ್ರಾವೋ ತಮ್ಮ ಪೋಸ್ಟ್‌ನಲ್ಲಿ ಟ್ರೋಫಿ ಎತ್ತಿ ಹಿಡಿದ ಫೋಟೊ ಒಂದನ್ನು ಪ್ರಕಟಿಸಿ ತಮ್ಮನ್ನು ತಾವೇ "ನಾನೀಗ ಅಧಿಕೃತವಾಗಿ ಚಾಂಪಿಯನ್" ಎಂದು ಹೊಗಳುತ್ತ ತಮ್ಮ ತಂಡ ಮತ್ತು ತಂಡದ ಮ್ಯಾನೆಜ್ಮೆಂಟ್‌ಗೆ ಶುಭಾಶಯ ತಿಳಿಸಿದ್ದಾರೆ. ಇದಕ್ಕೆ ಎಲ್ಲಾ ಅಭಿಮಾನಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ಲಭ್ಯವಾದರೆ ಒಬ್ಬ ಅಭಿಮಾನಿ ಮಾತ್ರ, "ಆದರೆ ಮಿಸ್ಟರ್ ಚಾಂಪಿಯನ್‌ಗೆ ವಿಶ್ವಕಪ್ ಗೆಲ್ಲಲು ಈವರೆಗೆ ಸಾಧ್ಯಯವಾಗಿಲ್ಲ" ಎಂದು ಟ್ರೋಲ್ ಮಾಡುವ ಪ್ರಯತ್ನ ನಡೆಸಿದ್ದಾನೆ. ಇದಕ್ಕೆ ಕೂಡಲೇ ಉತ್ತರ ನೀಡಿರುವ ಬ್ರಾವೋ, ತಮ್ಮ ವಿರುದ್ಧದ ಟ್ರೋಲ್‌ಗೆ ಪಾಠ ಕಲಿಸಿದ್ದಾರೆ. "ಬುದ್ಧಿವಂತ ನನ್ನ ಬಳಿ ಎರಡು ಇದೆ. ಗೆಳೆಯ ಸ್ವಲ್ಪ ಗೌರವ ಇರಲಿ. ನೀನು ಡಿಜೆ ಬ್ರಾವೋ ಅಭಿಮಾನಿ ಅಲ್ಲದೇ ಇರಬಹುದು. ಆದರೆ ಬಾಯ್ ತೆರೆಯುವ ಮುನ್ನ ಕೊಂಚ ಜ್ಞಾನ ಹೊಂದಿರಬೇಕಾಗುತ್ತದೆ," ಎಂದು ತಮ್ಮ ವಿರುದ್ಧದ ಟ್ರೋಲ್‌ಗೆ ಬ್ರಾವೊ ಮರಳಿ ಟ್ರೋಲ್ ಮಾಡಿದ್ದಾರೆ. ಅರೇಬಿಯನ್ಸ್‌ಗೆ ಚೊಚ್ಚಲ ಪ್ರಶಸ್ತಿ ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಟಿ10 ಲೀಗ್ ಫೈನಲ್ ಪಂದ್ಯದಲ್ಲಿ ಮರಾಠ ಅರೇಬಿಯನ್ಸ್ ತಂಡ, ಎದುರಾಳಿ ಡೆಕ್ಕಾನ್ ಗ್ಲಾಡಿಯೇಟರ್ಸ್ ತಂಡವನ್ನು 10 ಓವರ್ ಗಳಿಗೆ 88 ರನ್ ಗಳಿಗೆ ನಿಯಂತ್ರಿಸಿತು. ಬಳಿಕ ಗುರಿ ಬೆನ್ನತ್ತಿದ ಅರೇಬಿಯನ್ಸ್ 7.4 ಓವರ್‌ಗಳಲ್ಲಿ ಕೇವಲ ಎರಡು ವಿಕೆಟ್ ಕಳೆದುಕೊಂಡು 89 ರನ್ ಸಿಡಿಸಿ ಗೆಲುವಿನ ಕೇಕೆ ಹಾಕಿತು. ಅರೇಬಿಯನ್ಸ್ ಪರ ವಿಕೆಟ್‌ಕೀಪರ್ ಚಾಡ್ವಿಕ್ ವಾಲ್ಟನ್ ಕೇವಲ 26 ಎಸೆತಗಳಲ್ಲಿ 51 ರನ್ ಚಚ್ಚಿ ಮಿಂಚಿದರು. ಇದರೊಂದಿಗೆ ಮರಾಠ ಅರೇಬಿಯನ್ಸ್ ಟಿ10 ಲೀಗ್‌ನಲ್ಲಿ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/35Bkohg