ಹೊಸದಿಲ್ಲಿ: ದೇವೇಂದ್ರ ಫಡ್ನವಿಸ್ ಹಾಗೂ ಅಜಿತ್ ಪವಾರ್‌ಗೆ ಸರಕಾರ ರಚಿಸಲು ಅವಕಾಶ ಕಲ್ಪಿಸಿದ ರಾಜ್ಯಪಾಲರ ನಡೆ ಪ್ರಶ್ನಿಸಿ ಶಿವಸೇನೆ,ಎನ್‌ಸಿಪಿ, ಕಾಂಗ್ರೆಸ್ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಸುಪ್ರೀಂ ಕೋರ್ಟ್ ಮಂಗಳವಾರ ಬೆಳಗ್ಗೆ 10.30ಕ್ಕೆ ತೀರ್ಪು ಪ್ರಕಟಿಸಲಿದೆ. ಬಿಜೆಪಿ ಮತ್ತು ಶಿವಸೇನೆ, ಎನ್‌ಸಿಪಿ, ಕಾಂಗ್ರೆಸ್ ನಡುವೆ ಶಾಸಕರ ಸಂಖ್ಯಾಬಲದ ಬಗ್ಗೆ ಉಂಟಾಗಿರುವ ಗೊಂದಲ ನಿವಾರಿಸುವ ನಿಟ್ಟಿನಲ್ಲಿ ಬಹುಮತ ಸಾಬೀತು ಪಡಿಸಲು ನ್ಯಾಯಾಲಯ ನಿರ್ದೇಶನ ನೀಡುವ ಸಾಧ್ಯತೆಯಿದೆ. ಅರ್ಜಿದಾರರು ಮತ್ತು ಪ್ರತಿವಾದಿಗಳ ಪರ ವಕೀಲರ ಬಿರುಸಿನ ವಾದ-ಪ್ರತಿವಾದದ ಬಳಿಕ ನ್ಯಾ. ಎನ್ ವಿ ರಮಣ, ನ್ಯಾ. ಅಶೋಕ್ ಭೂಷಣ್ ಮತ್ತು ನ್ಯಾ. ಸಂಜಯ್ ಖನ್ನಾ ಅವರಿದ್ದ ತ್ರಿಸದಸ್ಯ ಪೀಠ ತೀರ್ಪನ್ನು ಕಾಯ್ದಿರಿಸಿತು. ಇದಕ್ಕೂ ಮುನ್ನ, ನ್ಯಾಯಾಲಯದ ನಿರ್ದೇಶನದಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ರಾಜ್ಯಪಾಲರು ಸರಕಾರ ರಚನೆಗೆ ಫಡ್ನವಿಸ್‌ಗೆ ನೀಡಿದ್ದ ಆಹ್ವಾನ ಪತ್ರ ಹಾಗೂ ಫಡ್ನವಿಸ್ ರಾಜ್ಯಪಾಲರಿಗೆ ಸಲ್ಲಿಸಿದ್ದ ಬೆಂಬಲ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಸುಮಾರು ಎರಡು ಗಂಟೆಗಳ ಕಾಲ ಸುಪ್ರೀಂ ಕೋರ್ಟ್‌ನ ಕೋರ್ಟ್ ಹಾಲ್ 2ರಲ್ಲಿ ಶಿವಸೇನೆ-ಎನ್‌ಸಿಪಿ, ಕಾಂಗ್ರೆಸ್, , ಫಡ್ನವಿಸ್ ಮತ್ತು ರಾಜ್ಯಪಾಲರ ಕಾರ್ಯದರ್ಶಿ ಪರ ವಕೀಲರ ನಡುವಿನ ಪ್ರಖರ ವಾದ ಮಂಡನೆ ಗಮನ ಸೆಳೆಯಿತು. ಈ ವೇಳೆ ಕರ್ನಾಟಕದಲ್ಲಿ ನಡೆದ ಇಂಥದ್ದೇ ರಾಜಕೀಯ ಹೈಡ್ರಾಮಾ ವೇಳೆ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪು ಪ್ರಸ್ತಾಪವಾಗಿದ್ದು ವಿಶೇಷ.
from India & World News in Kannada | VK Polls https://ift.tt/2QXeZg6