ಮುಂಬಯಿ: ರಾಜಕೀಯದ ಬೃಹನ್ನಾಟಕ ಮುಂದುವರಿದಿದ್ದು ಬಹುಮತ ಸಾಬೀತಿಗೂ ಮುನ್ನ ಉಪಮುಖ್ಯಮಂತ್ರಿ ಸ್ಥಾನಕ್ಕೆ ಎನ್ಸಿಪಿಯ ರಾಜೀನಾಮೆ ನೀಡಿದ್ದಾರೆ ಎಂಬುದಾಗಿ ಸ್ಥಳೀಯ ಮಾಧ್ಯಮಗಳು ಮೂಲಗಳನ್ನಾಧರಿಸಿ ವರದಿ ಮಾಡಿವೆ. ಮಂಗಳವಾರ ಬೆಳಿಗ್ಗೆ ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಗಳ ಸಂಬಂಧ ಆದೇಶ ನೀಡಿದ್ದ ಸುಪ್ರೀಂ ಕೋರ್ಟ್ ಬುಧವಾರ ಸಂಜೆ 5 ಗಂಟೆ ಮೊದಲು ಬಹುಮತ ಸಾಬೀತು ಪಡಿಸುವಂತೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ಗೆ ಆದೇಶಿಸಿತ್ತು. ಮತ್ತು ತೆರೆದ ಬ್ಯಾಲೆಟ್ನಲ್ಲಿ ಮತದಾನ ಪ್ರಕ್ರಿಯೆ ನಡೆಸುವಂತೆ ರಾಜ್ಯಪಾಲರಿಗೆ ಸೂಚಿಸಿತ್ತು. ಇದಾದ ಬೆನ್ನಿಗೆ ಇದೀಗ ಡಿಸಿಎಂ ಅಜಿತ್ ಪವಾರ್ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ರಾಜೀನಾಮೆ ನೀಡಿದ್ದಾರೆ ಎಂಬ ವರದಿಗಳು ಹೊರಬರುತ್ತಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಾಯಕ ಜಯಂತ್ ಪಾಟೀಲ್, ಮಾಧ್ಯಮಗಳ ಮೂಲಕ ಅಜಿತ್ ಪವಾರ್ ರಾಜೀನಾಮೆ ನೀಡಿದ್ದಾರೆ ಎಂಬುದನ್ನು ತಿಳಿದುಕೊಂಡಿರುವೆ. ಇದರ ಬಗ್ಗೆ ನನಗೇನೂ ಗೊತ್ತಿಲ್ಲ. ಇದರ ಬಗ್ಗೆ ತಿಳಿದುಕೊಂಡು ಪ್ರತಿಕ್ರಿಯೆ ನೀಡುತ್ತೇನೆ ಎಂದಿದ್ದಾರೆ. ಈ ಬೆಳವಣಿಗೆ ಬೆನ್ನಿಗೆ ಮಂಗಳವಾರ ಮಧ್ಯಾಹ್ನ 3.30 ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪತ್ರಿಕಾಗೋಷ್ಠಿ ಕರೆದಿದ್ದು ಇದೀಗ ಎಲ್ಲರ ಚಿತ್ತ ಸಿಎಂರ ಸುದ್ದಿಗೋಷ್ಠಿಯತ್ತ ನೆಟ್ಟಿದೆ. ಅಜಿತ್ ಪವಾರ್ ರಾಜೀನಾಮೆ ಹಾಗೂ ತಮ್ಮ ಮುಂದಿನ ನಡೆಗಳನ್ನು ದೇವೇಂದ್ರ ಫಡ್ನವೀಸ್ ಮಾಧ್ಯಮಗಳ ಮುಂದೆ ತೆರೆದಿಡುವ ಸಾಧ್ಯತೆ ಇದೆ. ರಾಜಕೀಯ ಪಂಡಿತರ ಪ್ರಕಾರ ಪತ್ರಿಕಾಗೋಷ್ಠಿ ನಂತರ ದೇವೇಂದ್ರ ಫಡ್ನವೀಸ್ ರಾಜೀನಾಮೆ ನೀಡುವ ಸಾಧ್ಯತೆಗಳು ದಟ್ಟವಾಗಿವೆ.
from India & World News in Kannada | VK Polls https://ift.tt/2OJfpEd