'ಕೈ' ಕೊಡಲು ಟ್ವಿಟ್ಟರ್‌ನಲ್ಲೇ ಸಿಂಧ್ಯಾ ಸುಳಿವು ? ಹಿರಿಯರ ಕಾಟಕ್ಕೆ 'ರಾಹುಲ್ ಅನುಯಾಯಿ'ಗೆ ಬೇಸರ?

ಹೊಸ ದಿಲ್ಲಿ: ಪಕ್ಷಕ್ಕೆ ಮಹಾರಾಷ್ಟ್ರದಲ್ಲಿ ಬಿಜೆಪಿ ಕೊಟ್ಟ ಶಾಕ್ ಅರಗಿಸಿಕೊಳ್ಳುವ ಮುನ್ನವೇ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ನಾಯಕನಿಂದಲೇ ಕಾಂಗ್ರೆಸ್‌ಗೆ ಆಘಾತ ಎದುರಾಗಿದೆ. ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ, ಯುವ ನೇತಾರ ಜ್ಯೋತಿರಾಧಿತ್ಯ ಸಿಂಧ್ಯಾ, ತಮ್ಮ ಟ್ವಿಟರ್‌ ಪ್ರೊಫೈಲ್‌ನಲ್ಲಿ ಕಾಂಗ್ರೆಸ್ ಪಕ್ಷದ ಹೆಸರನ್ನೇ ತೆಗೆದುಹಾಕಿದ್ದಾರೆ. ತಾವು ‘ಸಾರ್ವಜನಿಕ ಸೇವಕ ಹಾಗೂ ಕ್ರಿಕೆಟ್ ಉತ್ಸಾಹಿ’ ಎಂದಷ್ಟೇ ತಮ್ಮ ‘ಬಯೋ’ನಲ್ಲಿ ಸಿಂಧ್ಯಾ ಬರೆದುಕೊಂಡಿದ್ದಾರೆ! ಈ ಬಗ್ಗೆ ಸುದ್ದಿಸಂಸ್ಥೆ ಎನ್‌ಎನ್ಐಗೆ ಸ್ಪಷ್ಟನೆಯನ್ನೂ ಜ್ಯೋತಿರಾಧಿತ್ಯ ಸಿಂಧ್ಯಾ ನೀಡಿದ್ದಾರೆ. ತಿಂಗಳ ಹಿಂದೆಯೇ ತಾವು ತಮ್ಮ ಟ್ವಿಟ್ಟರ್ ಬಯೋ ಬದಲಾವಣೆ ಮಾಡಿರೋದಾಗಿ ಸಿಂಧ್ಯಾ ತಿಳಿಸಿದ್ಧಾರೆ. ಸ್ನೇಹಿತರ ಸಲಹೆಯಂತೆ ತಾವು ತಮ್ಮ ಬಯೋ ಸಣ್ಣದಾಗಿ ಬರೆದುಕೊಂಡಿರುವಾಗಿ ತಿಳಿಸಿರುವ ಸಿಂಧ್ಯಾ, ವದಂತಿಗಳೆಲ್ಲಾ ಆಧಾರರಹಿತ ಎಂದು ಸ್ಪಷ್ಟನೆ ನೀಡಿದ್ಧಾರೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ವೇಳೆಯಲ್ಲಿ ಕಮಲ್ ನಾಥ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯ್ತು. ಈ ವೇಳೆ ಜ್ಯೋತಿರಾಧಿತ್ಯ ಸಿಂಧ್ಯಾ ಅವರನ್ನು ಮಧ್ಯಪ್ರದೇಶದ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡುವಂತೆ ಬೆಂಬಲಿಗರು ಒತ್ತಾಯಿಸುತ್ತಲೇ ಬಂದಿದ್ದಾರೆ. ಇದೇ ವಿಚಾರವಾಗಿ ದಿಗ್ವಿಜಯ್ ಸಿಂಗ್ ಹಾಗೂ ಕಮಲ್ ನಾಥ್ ಜೊತೆಗೂ ಜ್ಯೋತಿರಾಧಿತ್ಯ ಸಿಂಧ್ಯಾ ಮನಸ್ತಾಪಕ್ಕೆ ಕಾರಣವಾಗಿತ್ತು. ಏಕೆಂದರೆ, ದಿವಂಗತ ಅರ್ಜುನ್ ಸಿಂಗ್ ಅವರ ಪುತ್ರ ಅಜಯ್ ಸಿಂಗ್‌ ಅವರನ್ನು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಲು ದಿಗ್ವಿಜಯ್ ಸಿಂಗ್ ಹಾಗೂ ಕಮಲ್ ನಾಥ್ ಒಳಗೊಳಗೇ ಪ್ರಯತ್ನಗಳನ್ನು ಮಾಡುತ್ತಿದ್ದರು. ಇನ್ನೊಂದು ಕಡೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ರಾಹುಲ್ ಗಾಂಧಿಗೆ ಆಪ್ತವಾಗಿರುವ ಎಲ್ಲ ಯುವಕರನ್ನು ಪಕ್ಷದಿಂದ ದೂರ ಇಡುತ್ತಿದ್ದಾರೆ ಅನ್ನೋ ಆರೋಪವೂ ಇದೆ. ಹರ್ಯಾಣ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಅಶೋಕ್ ತನ್ವರ್ ಕೂಡಾ ಇದೇ ಕಾರಣಕ್ಕೆ ಕಾಂಗ್ರೆಸ್ ತೊರೆದಿದ್ದರು. ಕಾಂಗ್ರೆಸ್‌ನ ಹಿರಿಯ ನಾಯಕರು, ತಮ್ಮದೇ ಪಕ್ಷದ ಕಿರಿಯ ನಾಯಕರನ್ನು ರಾಜಕೀಯವಾಗಿ ಮುಗಿಸುತ್ತಿದ್ದಾರೆ ಎಂದು ಅಶೋಕ್ ತನ್ವರ್ ಆರೋಪಿಸಿದ್ದರು. ಇದೀಗ ಜ್ಯೋತಿರಾಧಿತ್ಯ ಸಿಂಧ್ಯಾ ಕೂಡಾ ಅಶೋಕ್ ತನ್ವರ್ ಹಾದಿಯನ್ನೇ ಹಿಡಿಯುತ್ತಾರಾ ಎಂಬ ಅನುಮಾನಗಳು ಶುರುವಾಗಿವೆ. ಏಕೆಂದರೆ, ಗ್ವಾಲಿಯಾರ್‌ನ ರಾಜಮನೆತನಕ್ಕೆ ಸೇರಿದ ಜ್ಯೋತಿರಾಧಿತ್ಯ ಸಿಂಧ್ಯಾ, ಈ ಹಿಂದೆ ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ತಾವೂ ಕೂಡಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಕಾಂಗ್ರೆಸ್ ಪಕ್ಷದಲ್ಲಿ ಸಿಂಧ್ಯಾ ಕುರಿತಾದ ನೂರೆಂಟು ವದಂತಿಗಳು ಹರಿದಾಡುತ್ತಿವೆ. ಆದ್ರೆ, ಅಧಿಕೃತವಾಗಿ ಪಕ್ಷ ಬಿಡುವ ಯಾವುದೇ ಮಾಹಿತಿಯನ್ನೂ ಸಿಂಧ್ಯಾ ಪರಿವಾರ ಹೊರಹಾಕಿಲ್ಲ.


from India & World News in Kannada | VK Polls https://ift.tt/2QLaIfI

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...