ಹೊಸದಿಲ್ಲಿ: ಬಿಡುವಿಲ್ಲದ ಕ್ರಿಕೆಟ್ ಮಧ್ಯೆ ಪ್ರತಿಯೊಬ್ಬ ಕ್ರಿಕೆಟಿಗನೂ ವಿಶ್ರಾಂತಿ ಅತಿ ಮುಖ್ಯವೆನಿಸುತ್ತದೆ. ಮುಂಬರುವ ಸರಣಿಗೂ ಮುನ್ನ ತಮ್ಮ ಪ್ರೀತಿ ಪಾತ್ರರೊಂದಿಗೆ ಸಮಯವನ್ನು ಕಳೆದು ತಾಜಾತನವನ್ನು ಕಾಪಾಡಿಕೊಳ್ಳುವುದರತ್ತ ಗಮನ ಹರಿಸಬೇಕಿದೆ. ಆಟಗಾರನೊಬ್ಬ ದೈಹಿಕ ಫಿಟ್ನೆಸ್ ಮಾತ್ರವಲ್ಲದೆ ಮಾನಸಿಕವಾಗಿಯೂ ಉತ್ತಮ ಮನೋಸ್ಥಿತಿಯನ್ನು ಹೊಂದಿರಬೇಕು. ಇದನ್ನೇ ಕಾಪಾಡಿಕೊಂಡಿರುವ ಬಂದಿರುವ ಟೀಮ್ ಇಂಡಿಯಾ ನಾಯಕ ಸದ್ಯ ಪತ್ನಿ ಜತೆಗೆ ಸಂತೋಷದ ಸಮಯವನ್ನು ಹಂಚಿದ್ದಾರೆ. ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ನಡೆದ ಟ್ವೆಂಟಿ-20 ಸರಣಿಯಿಂದ ವಿಶ್ರಾಂತಿ ಪಡೆದಿರುವ ವಿರಾಟ್ ಕೊಹ್ಲಿ, ಪತ್ನಿ ಜತೆ ಭೂತಾನ್ನಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಬಳಿಕ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿಯ ವೇಳೆ ತಂಡವನ್ನು ಸೇರಿಕೊಂಡಿದ್ದರು. ಇಂದೋರ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಇನ್ನಿಂಗ್ಸ್ ಹಾಗೂ 130 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು. ಬಳಿಕ ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಚಾರಿತ್ರಿಕ ಪಿಂಕ್ ಬಾಲ್ ಡೇ ನೈಟ್ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 46 ರನ್ ಅಂತರದ ಗೆಲುವು ಬಾರಿಸಿತ್ತು. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ಗೈದಿತ್ತು. ಅಷ್ಟೇ ಯಾಕೆ ಗುಲಾಬಿ ಚೆಂಡಿನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್ಮನ್ ಎಂಬ ಹಿರಿಮೆಗೆ ಕಿಂಗ್ ಕೊಹ್ಲಿ ಭಾಜನವಾಗಿದ್ದರು. ಇದರಂತೆ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಭರ್ಜರಿ ಮುನ್ನಡೆ ಸಾಧಿಸಿರುವ ವಿರಾಟ್ ಕೊಹ್ಲಿ, ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ಗೆ ಸಡ್ಡು ಹೊಡೆದಿದ್ದಾರೆ. ಕೊಹ್ಲಿಗಿನ್ನು ಅಗ್ರಪಟ್ಟಕ್ಕೆ ಮರಳಲು ಕೇವಲ ಮೂರು ಅಂಕಗಳ ಅವಶ್ಯಕತೆಯಿದೆ. ಅಂದ ಹಾಗೆ ಭಾರತ ಹಾಗೂ ವೆಸ್ಟ್ಇಂಡೀಸ್ ನಡುವಣ ಟ್ವೆಂಟಿ-20 ಸರಣಿಯು ಡಿಸೆಂಬರ್ 6ರಂದು ಹೈದರಾಬಾದ್ನಲ್ಲಿ ಆರಂಭವಾಗಲಿದೆ. ಇತ್ತಂಡಗಳು ತಲಾ ಮೂರು ಏಕದಿನ ಹಾಗೂ ಟ್ವೆಂಟಿ-20 ಸರಣಿಗಳಲ್ಲಿ ಭಾಗವಹಿಸಲಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2Dlu3wf