ಮಂಗಳೂರು: ಉಡುಪಿ ಜಿಲ್ಲೆಯ ಕೋಟುತಟ್ಟುವಿನ ಕೊರಗ ಕುಟುಂಬದ ಮೆಹೆಂದಿ ಕಾರ್ಯಕ್ರಮದಲ್ಲಿ ಪೊಲೀಸರು ದೌರ್ಜನ್ಯ ನಡೆಸಿರುವ ಪ್ರಕರಣವನ್ನು ಸಿಐಡಿ ತನಿಖೆಗೆ ಆದೇಶಿಸಿರುವುದು ಕಣ್ಣೊರೆಸುವ ತಂತ್ರವಲ್ಲದೆ ಬೇರೇನೂ ಅಲ್ಲ. ನಿಜಾಂಶ ಹೊರಬರಬೇಕಾದರೆ ನಿವೃತ್ತ ಜಿಲ್ಲಾ ನ್ಯಾಯಾಧೀಶರ ಮೂಲಕ ತನಿಖೆ ನಡೆಸಲಿ ಎಂದು ಶಾಸಕ ಯು.ಟಿ.ಖಾದರ್ ಸವಾಲು ಹಾಕಿದರು. ರಾಜ್ಯ ಪೊಲೀಸರೇ ಸಿಐಡಿಯಲ್ಲಿದ್ದಾರೆ. ಇದೇ ಪೊಲೀಸರು ಕೊರಗ ಕುಟುಂಬದ ವಿರುದ್ಧವೇ ದೂರು ದಾಖಲಿಸಿದ್ದಾರೆ. ಹಾಗಾಗಿ ಅವರಿಂದ ನ್ಯಾಯಯುತ ತನಿಖೆ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಸರಕಾರದ ಹಸ್ತಕ್ಷೇಪ ನಡೆಯುವ ಸಾಧ್ಯತೆಯೂ ಇರುವುದರಿಂದ ನ್ಯಾಯಾಧೀಶರ ತನಿಖೆಯೇ ಸೂಕ್ತ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ಅವರು ತಿಳಿಸಿದರು. ಕೊರಗ ಕುಟುಂಬದ ಮೇಲೆ ದೌರ್ಜನ್ಯ ನಡೆಸಿದ ಪೊಲೀಸರ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕು. ಮದುಮಗ ಸೇರಿದಂತೆ ಕೊರಗ ಕುಟುಂಬದ ಮೇಲೆ ಹಾಕಿರುವ ಸುಳ್ಳು ಪ್ರಕರಣವನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು. ಆ ಕುಟುಂಬಕ್ಕೆ ಪರಿಹಾರ ಕೊಡಬೇಕು. ಪ್ರಕರಣದ ತನಿಖೆ ನಡೆಸಿ, ಮುಂದೆ ಇಂಥ ಘಟನೆ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಖಾದರ್ ಆಗ್ರಹಿಸಿದರು. ಸರಕಾರದ ಕುಮ್ಮಕ್ಕು ಇಲ್ಲದೆ ಪೊಲೀಸರು ಕೊರಗರ ಮನೆಗೆ ನುಗ್ಗಿ ಇಂಥ ದೌರ್ಜನ್ಯ ಮಾಡಲು ಸಾಧ್ಯವೇ ಇಲ್ಲ. ಈಗ ಒಬ್ಬೊಬ್ಬ ಸಚಿವರು ಅವರ ಮನೆಗೆ ಹೋಗಿ ಜನರನ್ನು ಮೂರ್ಖರನ್ನಾಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಬೇರೆ ಜಿಲ್ಲೆಯಲ್ಲಿ ಇಂಥ ಘಟನೆ ನಡೆಸಿದ್ದರೆ, ಏನೇನೋ ಆಗುತ್ತಿತ್ತು. ಶೋಷಿತ ವರ್ಗದ ಮೇಲೆ ದಬ್ಬಾಳಿಕೆ ಸರಿಯಲ್ಲ. ಇದನ್ನು ಸುಮ್ಮನೆ ಬಿಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಕಾಂಗ್ರೆಸ್ ಮುಖಂಡ ವಿಶ್ವಾಸ್‌ಕುಮಾರ್ ದಾಸ್, ದಲಿತ ಮುಖಂಡರಾದ ಪದ್ಮನಾಭ ನರಿಂಗಾನ, ಅಶೋಕ್ ಕೊಂಚಾಡಿ, ರೋಹಿತ್ ಉಳ್ಳಾಲ್, ರಘುರಾಜ್ ಕದ್ರಿ, ಹೊನ್ನಯ್ಯ, ಸುರೇಶ್, ದಿನೇಶ್ ಮತ್ತಿತರರು ಉಪಸ್ಥಿತರಿದ್ದರು.
from India & World News in Kannada | VK Polls https://ift.tt/3FSkJyH