ಲಖನೌ: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಘಟಾನುಘಟಿ ನಾಯಕರ ಪಕ್ಷಾಂತರದಿಂದ ಕಂಗೆಟ್ಟಿರುವ ಬಿಜೆಪಿಯು ತಾನು ಈ ಎಲೆಕ್ಷನ್‌ನಲ್ಲಿ ಗೆಲುವು ಸಾಧಿಸಿ ಲೋಕಸಭೆ ಚುನಾವಣೆಯ ಹಾದಿ ಸುಲಭ ಮಾಡಿಕೊಳ್ಳಲು ಸಕಲ ರೀತಿಯಲ್ಲಿ ರಣತಂತ್ರ ರೂಪಿಸಿದೆ. ಹೀಗಾಗಿ ಬಿಜೆಪಿಯು ರಾಜ್ಯದಲ್ಲಿ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿಯೇ ಕಲ್ಯಾಣ್ ಸಿಂಗ್ ಫಾರ್ಮುಲಾ ಪಾಲಿಸಿದೆ. ಇತರೆ ಹಿಂದುಳಿದ ವರ್ಗ (ಒಬಿಸಿ), ದಲಿತ ಸಮುದಾಯದವರಿಗೆ ಟಿಕೆಟ್ ಹಂಚಿಕೆಯಲ್ಲಿ ಎಲ್ಲ ಸಮುದಾಯದವರಿಗೆ ಆದ್ಯತೆ ನೀಡಿ 1991 ರಲ್ಲಿ ಸರಳ ಬಹುಮತ ಸಾಧಿಸಿದ್ದ ಕಲ್ಯಾಣ್ ಸಿಂಗ್ ಅವರ ಚಾಣಾಕ್ಷತನವನ್ನೇ ಮುಂದಿನ ತಿಂಗಳು ನಡೆಯುತ್ತಿರುವ ಚುನಾವಣೆಗೂ ಬಿಜೆಪಿ ಅನ್ವಯಿಸಿದೆ. ಅದರಲ್ಲೂ, 2014ರ ಲೋಕಸಭೆ ಚುನಾವಣೆಯಲ್ಲಿಯೂ ಇದೇ ಸೂತ್ರ ಅಳವಡಿಸಿಕೊಂಡು ಮುನ್ನಡೆ ಸಾಧಿಸಿದ ಬಿಜೆಪಿಯು ಈಗ ಅದನ್ನೇ ಮರುಕಳಿಸಿದೆ. ಉತ್ತರ ಪ್ರದೇಶ ರಾಜ್ಯವು ದೇಶದಲ್ಲೇ ಬೃಹತ್ ರಾಜ್ಯವಾಗಿರುವ, ಹೆಚ್ಚು ವಿಧಾನಸಭೆ ಕ್ಷೇತ್ರಗಳಿರುವ ರಾಜ್ಯವಾಗಿರುವುದರಿಂದ ಹಾಗೂ ಪ್ರತಿಯೊಂದು ಸಣ್ಣ ಸಮುದಾಯವೂ ಮತಬೇಟೆ ದೃಷ್ಟಿಯಿಂದ ಪ್ರಮುಖ ಆಗಿರುವುದರಿಂದ ಒಬಿಸಿ, ದಲಿತರು ಸೇರಿ ಸಣ್ಣ ಸಮುದಾಯದವರಿಗೂ 107 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿರುವ ಬಿಜೆಪಿಯು ಆದ್ಯತೆ ನೀಡಿದೆ. ಇದೇ ಕಾರಣದಿಂದಾಗಿ ಸಮುದಾಯಗಳ ಆಧಾರಿತವಾಗಿ 20 ಹೊಸ ಮುಖಗಳಿಗೂ ಟಿಕೆಟ್ ನೀಡಿದೆ ಎಂದು ತಿಳಿದುಬಂದಿದೆ. ಮೇಲ್ಜಾತಿಯ ಮತಗಳ ಮೇಲೂ ಕಣ್ಣಿಟ್ಟಿರುವ ಬಿಜೆಪಿಯು ಬ್ರಾಹ್ಮಣರು, ವೈಶ್ಯರು ಸೇರಿ ಎಲ್ಲ ಮೇಲ್ಜಾತಿಗಳಿಗೂ ಆದ್ಯತೆ ನೀಡಿದೆ. ಆದರೆ, ಬದಲಾದ ಕಾಲಘಟ್ಟದಲ್ಲಿ, ಎಸ್‌ಪಿ, ಬಿಎಸ್‌ಪಿ ಹೊಂದಿರುವ ಒಬಿಸಿ, ದಲಿತರ ಮತ ಸೆಳೆಯುವಲ್ಲಿ ಕಲ್ಯಾಣ್ ಸಿಂಗ್ ಫಾರ್ಮುಲಾ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದು ಕುತೂಹಲ ಕೆರಳಿಸಿದೆ.
from India & World News in Kannada | VK Polls https://ift.tt/3qy4P7e