ತಿರುವನಂತಪುರಂ: ಕೇರಳದ ‘ಮೀಡಿಯಾ ಒನ್’ ಸುದ್ದಿವಾಹಿನಿಯ ಪ್ರಸಾರ ಸ್ಥಗಿತಗೊಳಿಸಿ ಕೇಂದ್ರ ಸರಕಾರ ಹೊರಡಿಸಿರುವ ಆದೇಶಕ್ಕೆ ಕೇರಳ ಹೈಕೋರ್ಟ್ ಎರಡು ದಿನಗಳವರೆಗೆ ತಡೆಯಾಜ್ಞೆ ನೀಡಿದೆ. ‘ಭದ್ರತಾ ಕಾರಣ’ಗಳಿಂದಾಗಿ ಕೇಂದ್ರ ಸರಕಾರದ ಪರವಾನಗಿ ಪಡೆದ ಚಾನೆಲ್‌ಗಳ ಪಟ್ಟಿಯಿಂದ ಮೀಡಿಯಾ ಒನ್ ಸುದ್ದಿವಾಹಿನಿಯನ್ನು ತೆಗೆದುಹಾಕಿದ ಕಾರಣ ಸೋಮವಾರ ಮಧ್ಯಾಹ್ನ 12.30ರ ಸುಮಾರಿಗೆ ಚಾನೆಲ್ ಪ್ರಸಾರ ಸ್ಥಗಿತಗೊಂಡಿತು. ಭದ್ರತಾ ಕಾರಣಗಳಿಂದಾಗಿ ಚಾನೆಲ್ ಪರವಾನಗಿ ನವೀಕರಿಸುವುದಿಲ್ಲ ಎಂದು ಆದೇಶಿಸಿದ್ದಕ್ಕಾಗಿ ಸ್ಥಗಿತಗೊಳಿಸಲಾಗಿತ್ತು. ಆದರೆ, ಮೀಡಿಯಾ ಒನ್ ಒಡೆತನ ಹೊಂದಿರುವ ‘ಮಾಧ್ಯಮಮ್ ಬ್ರಾಡ್‌ಕಾಸ್ಟಿಂಗ್ ಲಿಮಿಟೆಡ್’ ಸಂಸ್ಥೆಯು ಮಧ್ಯಾಹ್ನ 1.45ರ ಸುಮಾರಿಗೆ ಹೈಕೋರ್ಟ್ ಮೊರೆ ಹೋಯಿತು. ಮಧ್ಯಾಹ್ನ 3 ಗಂಟೆ ವೇಳೆಗೆ ತುರ್ತು ವಿಚಾರಣೆಗೆ ಒಪ್ಪಿದ ನ್ಯಾಯಾಲಯವು ಕೊನೆಗೆ ಕೇಂದ್ರದ ಆದೇಶಕ್ಕೆ ಎರಡು ದಿನ ತಡೆಯಾಜ್ಞೆ ನೀಡಿದೆ. ಸುದ್ದಿವಾಹಿನಿ ಪರ ವಾದ ಮಂಡಿಸಿದ ಹಿರಿಯ ವಕೀಲ ಎಸ್.ಶ್ರೀಕುಮಾರ್, ‘ಸುದ್ದಿವಾಹಿನಿಯು ದೇಶ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿಲ್ಲ. ಹಾಗಾಗಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಆದೇಶ ರದ್ದುಗೊಳಿಸಬೇಕು’ ಎಂದು ಮನವಿ ಮಾಡಿದರು. ಕೇಂದ್ರ ಸಚಿವಾಲಯದ ಪರ ಸಹಾಯಕ ಸಾಲಿಸಿಟರ್ ಜನರಲ್ ಎಸ್. ಮನು ವಾದ ಮಂಡಿಸಿದರು. ‘ಕೇಂದ್ರದಿಂದ ಸಮರ್ಪಕ ಸೂಚನೆ ಪ್ರಕಟವಾಗಲು ಸಮಯ ಬೇಕು’ ಎಂದರು. ಕೊನೆಗೆ ನ್ಯಾಯಾಲಯವು ಕೇಂದ್ರದ ಆದೇಶಕ್ಕೆ ಎರಡು ದಿನ ತಡೆಯಾಜ್ಞೆ ನೀಡಿ, ಬುಧವಾರಕ್ಕೆ ವಿಚಾರಣೆ ಮುಂದೂಡಿತು. ದಿಲ್ಲಿ ಹಿಂಸಾಚಾರ ವರದಿ ವೇಳೆ ಕೇಬಲ್ ನೆಟ್‌ವರ್ಕ್ ನಿಯಮ ಉಲ್ಲಂಘಿಸಿದ್ದಾರೆ ಎಂಬ ಕಾರಣ ನೀಡಿ 2020ರಲ್ಲೂ ಮೀಡಿಯಾ ಒನ್ ಪ್ರಸಾರವನ್ನು ಕೇಂದ್ರ ಸರಕಾರ ಎರಡು ದಿನ ಸ್ಥಗಿತಗೊಳಿಸಿತ್ತು.
from India & World News in Kannada | VK Polls https://ift.tt/yToz37YaJ