: ರಾಜಕೀಯ ತಿಕ್ಕಾಟದಿಂದ ಭಾರೀ ಸುದ್ದಿಯಲ್ಲಿರುವ ಮೇಕೆದಾಟು , ಅನುಮತಿಯೊಂದನ್ನು ಮಾತ್ರ ಕಾಯುತ್ತಿದೆ. ಉಳಿದಂತೆ ಭೂಸ್ವಾಧೀನ, ಸ್ಥಳಾಂತರ ಸೇರಿದಂತೆ ಯಾವುದೇ ಸಮಸ್ಯೆಗಳು ಯೋಜನೆಯನ್ನು ಬಾಧಿಸುತ್ತಿಲ್ಲ. ಒಮ್ಮೆ ಅನುಮತಿ ಸಿಕ್ಕರೆ ಕೆಲವೇ ವರ್ಷಗಳಲ್ಲಿ ಇದು ನಿರ್ಮಾಣವಾಗುತ್ತದೆ. ಯೋಜನೆಯಿಂದ 5 ಗ್ರಾಮಗಳು ಮುಳುಗಡೆಯಾಗಲಿದ್ದು, ಇಲ್ಲಿರುವ 200 ಕುಟುಂಬಗಳನ್ನು ಸ್ಥಳಾಂತರಿಸಬೇಕು. ರಾಮನಗರ ಜಿಲ್ಲೆಯ ಕಾಡಂಚಿನ ಮಡವಾಳ, ಕೊಂಗೆದೊಡ್ಡಿ, ಸಂಗಮ, ಮುತ್ತತ್ತಿ, ಬೊಮ್ಮಸಂದ್ರ ಗ್ರಾಮಗಳು ಮುಳುಗಡೆ ಹೊಂದಲಿವೆ. ಇತರೆ ನೀರಾವರಿ ಯೋಜನೆಗಳಿಗೆ ವ್ಯಕ್ತವಾಗುವ ಸ್ಥಳೀಯರ ವಿರೋಧದಂತೆ ಈ ಯೋಜನೆಗೆ ಸ್ಥಳೀಯರ ವಿರೋಧವೂ ಇಲ್ಲ. ಕಂದಾಯ ಮತ್ತು ಖಾಸಗಿ ಭೂ ಸ್ವಾಧೀನ ಪ್ರಮಾಣವು ತೀರಾ ಕಡಿಮೆ ಇರುವುದರಿಂದ ರಾಜ್ಯ ಸರಕಾರದ ಬೊಕ್ಕಸದ ಮೇಲೆ ಹೆಚ್ಚಿನ ಹೊರೆಯೂ ಇಲ್ಲ. ತಜ್ಞರ ಪ್ರಕಾರ 350 ಕೋಟಿ ರೂ. ವೆಚ್ಚದಲ್ಲಿ ಭೂ ಸ್ವಾಧೀನ ಮಾಡಬಹುದು. ಆದರೆ, ಅಂತಾರಾಜ್ಯ ನೀರಾವರಿ ವ್ಯಾಜ್ಯ ಆಗಿರುವುದರಿಂದ ಮತ್ತು ಕಾವೇರಿ ಐತೀರ್ಪಿನ ನಂತರ ಯೋಜನಾ ರೂಪುರೇಷೆ ಸಿದ್ದವಾಗಿದ್ದರಿಂದ ಯೋಜನೆ ಅನುಷ್ಠಾನ ವಿಳಂಬವಾಗುತ್ತಿದೆ. ನಿಜವೆಂದರೆ, ಕಾವೇರಿ ತೀರ್ಪಿನಂತೆ ತಮಿಳುನಾಡಿಗೆ ಹರಿಯುವ ನೀರಿನ ಕೊರತೆಯೂ ಆಗುವುದಿಲ್ಲ. ಕಾವೇರಿ ನ್ಯಾಯಮಂಡಳಿ ತೀರ್ಪಿನ ಪುಟ ಸಂಖ್ಯೆ 13 ಹಾಗೂ ಷೆಡ್ಯೂಲ್ 9ರಲ್ಲಿ ಕಾವೇರಿ ವ್ಯಾಪ್ತಿಯಲ್ಲಿ ಯೋಜನೆಗಳನ್ನು ಜಾರಿ ತರಲು ಅವಕಾಶವಿದೆ. ಜತೆಗೆ ಎರಡೂ ರಾಜ್ಯಗಳಿಗೆ ಮೇಕೆದಾಟುವಿನಿಂದ ಅನುಕೂಲವೇ ಆಗಿದೆ. ಯೋಜನೆ ಅನುಷ್ಠಾನದಿಂದ ರಾಜಕೀಯ ಪಕ್ಷಗಳಿಗೆ ಸೀಮಿತವಾಗಿರದ ಅದರ ಫಲಾಫಲಗಳು ಬೆಂಗಳೂರು ಸೇರಿದಂತೆ ನಾನಾ ಭಾಗದ ಜನರಿಗೆ ಪರೋಕ್ಷವಾಗಿ ಅನುಕೂಲಕರ ವಾತಾವರಣ ಸೃಷ್ಟಿಸಲಿದೆ. ಭವಿಷ್ಯದ ಕುಡಿವ ನೀರಿಗೆ ಮೂಲ: 2050ರ ವೇಳೆಗೆ ಬೆಂಗಳೂರಿನ ಮಹಾ ನಗರದ ಜನಸಂಖ್ಯೆ ಎರಡು ಕೋಟಿ ದಾಟಲಿದೆ. ಹಾಗೆಯೇ ದೇವನ ಹಳ್ಳಿ, ನೆಲಮಂಗಲ, ಹೊಸಕೋಟೆ ಹಾಗೂ ದೊಡ್ಡಬಳ್ಳಾಪುರ ತಾಲೂಕು ಕೇಂದ್ರಗಳೂ ಭವಿಷ್ಯದಲ್ಲಿ ಕುಡಿಯುವ ನೀರಿನ ಕೊರತೆ ಎದುರಿಸಲಿವೆ. ಒಂದು ಕಾಲದಲ್ಲಿ ಬೆಂಗಳೂರಿಗೆ ಕುಡಿಯುವ ನೀರು ಒದಗಿಸುತ್ತಿದ್ದ ಅರ್ಕಾವತಿ ನದಿ ಮೂಲ ಕೂಡ ಬತ್ತಿ ಹೋಗಿದೆ. ಬೆಂಗಳೂರು ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ಪರ್ಯಾಯ ನೀರಿನ ಮೂಲಗಳು ಇಲ್ಲ. ಹೀಗಾಗಿ ಯೋಜನೆಯೊಂದೇ ಭರವಸೆಯಾಗಿದೆ. ಒತ್ತಡ ನಿರ್ವಹಣೆ: ಕಾವೇರಿ ನ್ಯಾಯ ಮಂಡಳಿ ತೀರ್ಪಿನಂತೆ 177.5 ಟಿಎಂಸಿ ನೀರನ್ನು ಕಾವೇರಿಗೆ ಹರಿಸಬೇಕಾದ ಸಂದರ್ಭದಲ್ಲಿ ನೀರಿನ ಕೊರತೆ ಉದ್ಭವಿಸಿದಾಗ ಕಬಿನಿ, ಕೆಆರ್‌ಎಸ್, ಹಾರಂಗಿ, ಹೇಮಾವತಿ ಜಲಾಶಯದಿಂದ ಕಾವೇರಿಗೆ ನೀರು ಹರಿಸಬೇಕಾದ ಅಗತ್ಯತೆ ಸೃಷ್ಟಿಯಾಗುತ್ತಿದೆ. ಮೇಕೆದಾಟು ಯೋಜನೆಯಿಂದ ಸಂಗ್ರಹಿಸಿಕೊಳ್ಳುವ 60 - 65 ಟಿಎಂಸಿ ನೀರನ್ನು ಅಗತ್ಯವಿದ್ದಾಗ ಕಾವೇರಿಗೆ ಹರಿಸಬಹುದು. ಇದರಿಂದ ಇತರೆ ಜಲಾಶಗಳ ಮೇಲಿನ ಒತ್ತಡ ನಿವಾರಿಸಬಹುದು. ಜತೆಗೆ ಈ ವ್ಯಾಪ್ತಿಯ ರೈತರಿಗೂ ಹೆಚ್ಚು ನೀರಾವರಿ ಕಲ್ಪಿಸಬಹುದು. ನೀರಿನ ಕೊರತೆ ಎದುರಾಗುವ ಕಾಲುವೆ ಕೊನೆ ಭಾಗದ ರೈತರಿಗೆ ನೀರು ಹರಿಸಬಹುದಾಗಿದೆ. ಇನ್ನೂ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಬಳಿಕ ನೀರು ತಮಿಳುನಾಡಿಗೇ ಹರಿದು ಹೋಗುತ್ತದೆ. ಹೀಗಾಗಿ, ಸಂಕಷ್ಟದ ಸಂದರ್ಭದಲ್ಲಿ ಎರಡೂ ರಾಜ್ಯಗಳಿಗೂ ಈ ಯೋಜನೆ ಅನುಕೂಲ.
from India & World News in Kannada | VK Polls https://ift.tt/3u6zKJY