ಬೆಂಗಳೂರು: ಸೋಂಕು ತಗ್ಗಿದ ಬಳಿಕ ಮೇಕೆದಾಟು ಪಾದಯಾತ್ರೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಿರುವ ಕಾಂಗ್ರೆಸ್ ಅದರ ಬೆನ್ನಿಗೇ ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಮತ್ತೊಂದು ಪಾದಯಾತ್ರೆ ನಡೆಸಲು ಯೋಚಿಸುತ್ತಿದೆ. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪಕ್ಷದ ಕಾರ್ಯಾಧ್ಯಕ್ಷರುಗಳಾದ ಸಲೀಂ ಅಹ್ಮದ್, ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಆರ್. ಧ್ರುವನಾರಾಯಣ ಅವರೊಂದಿಗೆ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಸಮಾಲೋಚನೆ ನಡೆಸಿದರು. ಸೋಂಕು ಇಳಿದ ನಂತರ ಮೇಕೆದಾಟು ಪಾದಯಾತ್ರೆಯನ್ನು ಹೇಗೆ ಮುಂದುವರಿಸಬೇಕು ಎಂಬ ಬಗ್ಗೆ ಈ ಸಂದರ್ಭದಲ್ಲಿ ಪ್ರಸ್ತಾಪವಾಯಿತು. ಈ ಪಾದಯಾತ್ರೆಯ ಪ್ರಭಾವ ಹೆಚ್ಚಾಗುವಂತೆ ಮಾಡಬೇಕು. ಅದಕ್ಕೆ ನಾನಾ ಜಿಲ್ಲೆಗಳಿಂದ ಜನರು ಕಾಲ್ನಡಿಗೆ ಮೂಲಕ ಬಂದು ಸೇರಿವಂತೆ ಮಾಡಬೇಕು ಎಂಬ ಸಲಹೆಯೂ ಬಂತು. ಜತೆಗೆ ಮಹದಾಯಿ ಯೋಜನೆ ಸಂಬಂಧ ಪಾದಯಾತ್ರೆ ನಡೆಸುವ ಬಗ್ಗೆಯೂ ಚರ್ಚಿಸಲಾಯಿತು. ಮಹದಾಯಿ ಹೋರಾಟವು ಉತ್ತರ ಕರ್ನಾಟಕ ಜಿಲ್ಲೆಗಳ ಮೇಲೆ ಪ್ರಭಾವ ಬೀರಲಿವೆ. ಪಕ್ಷಕ್ಕೆ ಇದರಿಂದ ಅನುಕೂಲವೇ ಹೆಚ್ಚು. ಪಕ್ಷ ಜನರ ಪರ ಇರುವ ಬಗ್ಗೆ ವಿಶ್ವಾಸ ಮೂಡಿಸುವ ಕಾರ್ಯ ಮಾಡಬಹುದು ಎಂಬ ಅಭಿಪ್ರಾಯ ವ್ಯಕ್ತವಾಯಿತು ಎನ್ನಲಾಗಿದೆ. ಈ ಭಾಗದ ಹೋರಾಟಕ್ಕೆ ಯಾರೂ ನಾಯಕತ್ವ ವಹಿಸಬೇಕು ಮತ್ತು ಹೇಗೆ ಆರಂಭಿಸಬೇಕು ಎಂಬ ಬಗ್ಗೆ ಪಕ್ಷದ ಹಿರಿಯ ನಾಯಕರೊಂದಿಗೆ ಸಭೆ ನಡೆಸಿ ಸೂಕ್ತ ತೀರ್ಮಾನಕ್ಕೆ ಬರುವ ನಿಲುವು ಕೈಗೊಳ್ಳಲಾಯಿತು ಎಂದು ತಿಳಿದು ಬಂದಿದೆ. ಡಿಜಿಟಲ್ ಸದಸ್ಯತ್ವ ಚರ್ಚೆ: ಈ ಮಧ್ಯೆ ಎಐಸಿಸಿ ಪ್ರತಿನಿಧಿಗಳಾದ ಜ್ಯೋತಿ ಮಣಿ ಹಾಗೂ ಕೆ.ರಾಜು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದರು. ಡಿಜಿಟಲ್ ವಿಧಾನದ ಮೂಲಕ ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸುವ ಬಗ್ಗೆ ಚರ್ಚಿಸಿದರು.
from India & World News in Kannada | VK Polls https://ift.tt/3KxVbJB