ಹೊಸದಿಲ್ಲಿ: (ಐಸಿಸಿ), ತಂಡದ ಮಾಜಿ ನಾಯಕ ಬ್ರೆಂಡನ್ ಟೇಲರ್ ವಿರುದ್ಧ ಮೂರೂವರೆ ವರ್ಷಗಳ ಕಾಲ ನಿಷೇಧ ಶಿಕ್ಷೆ ಹೇರಿದೆ. ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಐಸಿಸಿ ಭ್ರಷ್ಟಾಚಾರ ತಡೆ ನೀಡಿ ಮತ್ತು ಐಸಿಸಿ ನೀತಿ ನಿಯಮಗಳನ್ನು ಉಲ್ಲಂಘಿಸಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ನಿಷೇಧ ಶಿಕ್ಷೆಗೆ ಗುರಿಯಾಗಿದ್ದಾರೆ. ಅಂದಹಾಗೆ ಕೆಲ ದಿನಗಳ ಹಿಂದಷ್ಟೇ ಬ್ರೆಂಡನ್ ತಾವು ಮಾಡಿರುವ ತಪ್ಪನ್ನು ಟ್ವಿಟರ್ ಮೂಲಕ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದರು. ಇದರ ಹಿಂದಿನ ಕಥೆಯನ್ನೂ ತೆರೆದಿಟ್ಟಿದ್ದರು. ಜೊತೆಗೆ ಐಸಿಸಿ ಕಡೆಯಿಂದ ನಿಷೇಧ ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯೂ ಇದೆ ಎಂದು ತಮ್ಮ ಸೋಷಿಯಲ್ ಮೀಡಿಯಾ ಗೋಡೆಯ ಮೇಲೆ ಬರೆದುಕೊಂಡಿದ್ದರು. ಫಿಕ್ಸರ್‌ಗಳು ಸಂಪರ್ಕಿಸಿದ ಸಂಗತಿಯನ್ನು ತಡವಾಗಿ ಐಸಿಸಿ ಗಮನಕ್ಕೆ ತಂದು ಆರ್ಟಿಕಲ್ 2.4.2 ನಿಯಮವನ್ನು ಟೇಲರ್ ಉಲ್ಲಂಘಿಸಿದ್ದಾರೆ. ಈ ನಿಯಮದ ಪ್ರಕಾರ ಬೇರೆ ವ್ಯಕ್ತಿಗಳಿಂದ ಹಣ, ಉಡುಗೊರೆ ಅಥವಾ ಬೇರೆ ರೀತಿಯ ಸವಲತ್ತುಗಳು ಲಭ್ಯವಾಗಿರುವ ಸಂಗತಿಯನ್ನು ಆಟಗಾರರು ಕೂಡಲೇ ಐಸಿಸಿ ಗಮನಕ್ಕೆ ತರಬೇಕು. ಜೊತೆಗೆ ಆರ್ಟಿಕಲ್ 2.4.3 ಮತ್ತು 2.4.4 ನಿಯಮಗಳ ಉಲ್ಲಂಘನೆಯೂ ಆಗಿದೆ ಎಂದು ಐಸಿಸಿ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಐಸಿಸಿ ಭ್ರಷ್ಟಾಚಾರ ತಡೆ ಘಟಕ ಹೇರಿರುವ ಎಲ್ಲ ಆರೋಪಗಳನ್ನು ಬ್ರೆಂಡನ್ ಟೇಲರ್ ಒಪ್ಪಿಕೊಂಡಿದ್ದಾರೆ. ವಿಚಾರಣೆಗೆ ಹಾಜರಾಗಿ ತಮ್ಮ ವಿರುದ್ಧ ಹೇರಲಾಗಿರುವ ಶಿಕ್ಷೆಗೆ ಸಮ್ಮತಿಸುವುದಾಗಿ ಹೇಳಿಕೊಂಡಿದ್ದಾರೆ. ಇನ್ನು 2021ರಲ್ಲಿ ಐರ್ಲೆಂಡ್ ವಿರುದ್ಧದ ಪಂದ್ಯದ ವೇಳೆ ಬ್ರೆಂಡನ್ ಟೇಲರ್ ಅವರಿಂದ ಪಡೆಯಲಾಗಿದ್ದ ಮೂತ್ರದ ಸ್ಯಾಂಪಲ್‌ನಲ್ಲಿ ನಿಷೇಧಿತ ಬೆನ್‌ಝೊಯ್ಲೆಕಾಗ್ನೈನ್ ಅಂಶ ಪತ್ತೆಯಾಗಿದೆ. ಈ ಮೂಲಕ ಐಸಿಸಿ ಡೋಪಿಂಗ್ ನಿಯಮವನ್ನೂ ಟೇಲರ್ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ. ಇವೆಲ್ಲದರ ಕಾರಣ ಯಾವುದೇ ಕ್ರಿಕೆಟ್ ಚಟುವಟಿಕೆಗಳಲ್ಲಿ ಮೂರೂವರೆ ವರ್ಷಗಳ ಕಾಲ ಪಾಲ್ಗೊಳ್ಳದೇ ಇರುವಂತೆ ಐಸಿಸಿ ನಿಷೇಧ ಹೇರಿದೆ. 2025ರ ಜುಲೈ 28ರ ಬಳಿಕ ಅವರು ಕ್ರಿಕೆಟ್ ಚಟುವಟಿಕೆಗಳಿಗೆ ಹಿಂದಿರುಗಬಹುದಾಗಿದೆ. "ಬ್ರೆಂಡನ್ ಜಿಂಬಾಬ್ವೆ ರಾಷ್ಟ್ರೀಯ ತಂಡದ ಮಾಜಿ ನಾಯಕ. 17 ವರ್ಷಗಳ ಕಾಲ ಜಿಂಆಬ್ವೆ ಪರ ಆಡಿದ್ದಾರೆ. ಅಷ್ಟು ಸುದೀರ್ಘಾವಧಿಯ ವೃತ್ತಿಬದುಕಿನಲ್ಲಿ ಹಲವು ಬಾರಿ ಐಸಿಸಿ ಆಯೋಜಿಸಿದ್ದ ಭ್ರಷ್ಟಾಚಾರ ತಡೆ ಸೆಮಿನಾರ್‌ಗಳಲ್ಲಿ ಪಾಲ್ಗೊಂಡಿದ್ದಾರೆ. ಡೋಪಿಂಗ್ ನೀತಿ ನಿಯಮಗಳ ಬಗ್ಗೆಯೂ ಅವರಿಗೆ ಚೆನ್ನಾಗಿ ಅರಿವಿದೆ. ಇದರಿಂದ ಎದುರಾಗುವ ಸಮಸ್ಯೆಗಳ ಬಗ್ಗೆಯೂ ಅವರಿಗೆ ಗೊತ್ತಿದೆ," ಎಂದು ಐಸಿಸಿ ಇಂಟೆಗ್ರಿಟಿ ಯೂನಿಟ್‌ನ ಜನರಲ್ ಮ್ಯಾನೇಜರ್ ಅಲೆಕ್ಸ್ ಮಾರ್ಷಲ್ ಹೇಳಿದ್ದಾರೆ. "ಅವರಂತಹ ಅನುಭವಿ ಆಟಗಾರರಿಂದ ಇಂತಹ ತಪ್ಪು ನಡೆದಿರುವುದು ಬಹಳಾ ಬೇಸರ ತಂದಿದೆ. ಅಂದಹಾಗೆ ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ಅವರು ಒಪ್ಪಿಕೊಂಡಿದ್ದಾರೆ. ಅದಕ್ಕೆ ತಕ್ಕ ಶಿಕ್ಷೆಯನ್ನೂ ಹೇರಲಾಗಿದೆ. ಫಿಕ್ಸಿಂಗ್ ಸಲುವಾಗಿ ಯಾರಾದರೂ ಸಂಪರ್ಕಿಸಿದರೆ ಅದನ್ನು ಐಸಿಸಿ ಗಮನಕ್ಕೆ ತರಲು ತಡ ಮಾಡಿದರೆ ಏನಾಗುತ್ತದೆ ಎಂಬುದು ಬ್ರೆಂಡನ್ ಮೂಲಕ ಉಳಿದ ಆಟಗಾರರಿಗೆ ಪಾಠವಾಗಲಿದೆ. ಸದ್ಯ ಗಾಯದ ಸಮಸ್ಯೆಯಿಂದ ಚೇತರಿಸುತ್ತಿರುವ ಬ್ರೆಂಡನ್ ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇವೆ," ಎಂದಿದ್ದಾರೆ. 2019ರಲ್ಲಿ ಜಿಂಬಾಬ್ವೆ ಪ್ರೀಮಿಯರ್ ಲೀಗ್ ಆರಂಭಿಸುವ ಸಲುವಾಗಿ ಭಾರತೀಯ ಉದ್ಯಮಿ ಒಬ್ಬರನ್ನು ಬ್ರೆಂಡನ್ ಭೇಟಿಯಾಗಿದ್ದರು. ಈ ಸಭೆಯ ವಿಡಿಯೋ ಮಾಡಿ, ಫಿಕ್ಸಿಂಗ್ ಸಲುವಾಗಿ ನಡೆಸುತ್ತಿರುವ ವಿಡಿಯೋ ಎಂದು ಬಿಡುಗಡೆ ಮಾಡುವುದಾಗಿ ಬ್ರೆಂಡನ್ ಅವರನ್ನು ಬ್ಲಾಕ್‌ಮೇಲ್ ಮಾಡಲಾಗಿತ್ತು. ಬಳಿಕ ಅವರ ಒತ್ತಡಕ್ಕೆ ಮಣಿದ ಜಿಂಬಾಬ್ವೆ ಆಟಗಾರ ಹಣ ಸ್ವೀಕರಿಸಿ ತಾಯ್ನಾಡಿಗೆ ಹಿಂದಿರುಗಿದ್ದರು. ಬಳಿಕ 4 ತಿಂಗಳ ನಂತರ ಈ ಸಂಗತಿಯನ್ನು ಐಸಿಸಿ ಗಮನಕ್ಕೆ ತಂದಿದ್ದಾರೆ. ತಡವಾಗಿ ಐಸಿಸಿ ಗಮನಕ್ಕೆ ತಂದ ಕಾರಣ ಮತ್ತಷ್ಟು ಸಮಸ್ಯೆಗೆ ತಿಳಿಸಿದ್ದಾರೆ. ತಮ್ಮ ಕುಟುಂಬದವರನ್ನು ಮೊದಲು ಸುರಕ್ಷಿತ ಸ್ಥಳದಲ್ಲಿ ಇರಿಸಲು ಆದ್ಯತೆ ಕೊಟ್ಟ ಕಾರಣ ವಿಚಾರ ಐಸಿಸಿ ಗಮನಕ್ಕೆ ತರಲು ತಡವಾಯಿತು ಎಂದು ಟೇಲರ್ ತಮ್ಮ ಹೇಳಿಕೆಯಲ್ಲಿ ವಿವರಿಸಿದ್ದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3J2tN5h