ಚಿಕ್ಕಬಳ್ಳಾಪುರ: ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ಇನ್ನು ನಾಲ್ಕೈದು ತಿಂಗಳಾಗಿಲ್ಲ. ಇಷ್ಟು ಬೇಗ ಯಾವ ಮೂರ್ಖರು ಸಿಎಂನ್ನು ಬದಲಾವಣೆ ಮಾಡಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಯಾರೂ ಇಷ್ಟು ಕಡಿಮೆ ಅವಧಿಯಲ್ಲಿ ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಲ್ಲ. ಅದೊಂದು ಗಾಳಿ ಸುದ್ದಿ. ನನ್ನ ಪ್ರಕಾರ ಕಠಿಣವಾಗಿ ಹೇಳುವುದಾದರೆ ಯಾವ ಮೂರ್ಖರು ಕೂಡಾ 4-6 ತಿಂಗಳಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡೋದು ಅಸಾಧ್ಯ ಎನ್ನುವ ಮೂಲಕ ವಿಷಯವನ್ನು ಸಾರಸಗಟಾಗಿ ತಳ್ಳಿಹಾಕಿದರು. ಹೆಸರು ಹೇಳಲಿ: ಬಿಜೆಪಿ ಸಚಿವರು ಮತ್ತು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರು ಸಂಪರ್ಕದಲ್ಲಿದ್ದರೋ ಗೊತ್ತಿಲ್ಲ. ಎದುರು ಸಿಕ್ಕಾಗ ಯಾರಾದರೂ ಮಾತನಾಡುತ್ತಾರೆ. ವಿಶ್ವಾಸ ಬೇರೆ ರಾಜಕಾರಣ ಬೇರೆ.ಯಾರ ಜತೆ ಸಂಪರ್ಕದಲ್ಲಿದ್ದಾರೆ ಎನ್ನುವುದನ್ನು ಹೇಳಿದರೆ ಆ ಹೇಳಿಕೆ ಬಗ್ಗೆ ವ್ಯಾಖ್ಯಾನ ಮಾಡಬಹುದು ಎಂದರು. ಚಾಲ್ತಿಯಲ್ಲಿರಲು ಪ್ರಸ್ತಾಪ: ಇದೆಲ್ಲಾ ರಾಜಕಾರಣದಲ್ಲಿ ಸಾಮಾನ್ಯವಾದ ಸಂಗತಿ. ಚುನಾವಣೆ ಇನ್ನು 15 ತಿಂಗಳಿದೆ. ಹೀಗಾಗಿ ಸದಾ ಚಾಲ್ತಿಯಲ್ಲಿರಬೇಕಲ್ಲ ಎಂಬ ಕಾರಣಕ್ಕೆ ಈ ರೀತಿಯ ಹೇಳಿಕೆಗಳನ್ನು ನೀಡುತ್ತಾರೆ. ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಮೊದಲು ಅವರು ಯಾರ ಜೊತೆ ಸಂಪರ್ಕದಲ್ಲಿದ್ದಾರೆ ಎಂಬುದುನ್ನು ಸ್ಪಷ್ಟಪಡಿಸಿದರೆ ಅದರ ಬಗ್ಗೆ ಮಾತನಾಡಬಹುದು ಎಂದರು. ಟಾಪ್ 3ನಲ್ಲಿ ಬರುತ್ತೇವೆ: ರಾಜ್ಯದಲ್ಲಿ 6 ಜಿಲ್ಲೆಗಳಲ್ಲಿ ಅಪೌಷ್ಟಿಕತೆಯಿಂದ ಕೆಲವು ದುಷ್ಪರಿಣಾಮಗಳು ಬೀರಿವೆ. ಹೀಗಾಗಿ ಆರೋಗ್ಯ ಸೂಚ್ಯಂಕದಲ್ಲಿ 8ರಿಂದ 9ನೇ ಸ್ಥಾನಕ್ಕೆ ಕುಸಿದಿದೆ. ಹೀಗಾಗಿ ಆ ಜಿಲ್ಲೆಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಮುಂದಿನ ಟಾಪ್ 3ನಲ್ಲಿ ಬರಲು ಬೇಕಾದ ವ್ಯವಸ್ಥೆ ಮಾಡಿದ್ದೇವೆ ಎಂದು ತಿಳಿಸಿದರು. ಅಭಿವೃದ್ಧಿಗೆ ತೊಡಕಾಗಲ್ಲ, ಜವಾಬ್ದಾರಿ ಹೆಚ್ಚಿದೆ ಜಿಲ್ಲಾ ಉಸ್ತುವಾರಿ ಬದಲಾವಣೆಯಿಂದ ಕಾರ್ಯಕರ್ತರು, ಮುಖಂಡರಿಗೆ ಬೇಸರವಾಗಿರುವುದು ಸಹಜ.ಆದರೆ ಜಿಲ್ಲೆಯ ಅಭಿವೃದ್ಧಿಗೆ ಯಾವುದೇ ತೊಡಕಾಗಲ್ಲ. ಬೇರೊಂದು ಜಿಲ್ಲೆಯ ಉಸ್ತುವಾರಿ ಸಿಕ್ಕಿರುವುದರಿಂದ ಇನ್ನು ಜವಾಬ್ದಾರಿ ಹೆಚ್ಚಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಉಸ್ತುವಾರಿ ಅಧಿಕಾರ ಇಲ್ಲದೇ ಇದ್ದರೂ ನಾನು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಂಕಣ ಬದ್ಧನಾಗಿದ್ದೇನೆ. ನಮ್ಮ ಹಿರಿಯರಾದ ಎಂಟಿಬಿ ನಾಗರಾಜ್ ಅವರ ಸಹಕಾರ ಮತ್ತು ಮುಖ್ಯಮಂತ್ರಿಗಳ ನೆರವಿನಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. ನಾನು ಯಾವ ಮುಖಂಡರು ಮತ್ತು ಕಾರ್ಯಕರ್ತರನ್ನು ಬಿಟ್ಟು ಹೋಗುತ್ತಿಲ್ಲ. ಜಿಲ್ಲೆಗೆ ಆಗಾಗ್ಗೆ ಭೇಟಿ ಕೊಟ್ಟು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಿಕ್ಕಿರುವುದರಿಂದ ನನ್ನ ಕಾರ್ಯಕ್ಷೇತ್ರವೂ ಈಗ ಹೆಚ್ಚಾಗಿದೆ. ಬೆಂಗಳೂರು ಗ್ರಾಮಾಂತರ, ಕೋಲಾರ, ಮೂರು ಜಿಲ್ಲೆಗಳಲ್ಲಿಓಡಾಡಿ ಪಕ್ಷ ಸಂಘಟಿಸುವ ಕೆಲಸ ಮಾಡುತ್ತೇನೆ. ಅಭಿವೃದ್ಧಿಗೂ ಕಂಕಣ ಬದ್ಧನಾಗಿದ್ದೇನೆ ಎಂದು ತಿಳಿಸಿದರು.
from India & World News in Kannada | VK Polls https://ift.tt/34bSXPo