ಮುಂಬಯಿ: ಹಿಂದುತ್ವ ಕುರಿತಂತೆ ಮಹಾರಾಷ್ಟ್ರದಲ್ಲಿ ಮಾಜಿ ಮಿತ್ರ ಪಕ್ಷಗಳಾದ ಹಾಗೂ ನಾಯಕರ ಮಾತಿನ ಸಮರ ತೀವ್ರಗೊಂಡಿದೆ. ‘ಬಿಜೆಪಿಯು ಹಿಂದುತ್ವವನ್ನು ಕೇವಲ ಅಧಿಕಾರದ ದಳವಾಗಿ ಬಳಸಿಕೊಂಡಿತು’ ಎಂದು ಶಿವಸೇನೆ ವಕ್ತಾರ ಸಂಜಯ್ ರಾವತ್ ಟೀಕಿಸಿದರೆ, ‘ಹಿಂದುತ್ವ ಎನ್ನುವುದನ್ನು ಶಿವಸೇನೆ ಕಾಗದದಲ್ಲಿ ಪಾಲಿಸಿದೆಯೇ ವಿನಾ ಹಿಂದುತ್ವದ ಬಗ್ಗೆ ಆ ಪಕ್ಷಕ್ಕೆ ನಿಜವಾದ ಕಾಳಜಿ ಇಲ್ಲ’ ಎಂದು ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತಿರುಗೇಟು ನೀಡಿದ್ದಾರೆ. ‘ಬಿಜೆಪಿ ಜತೆಗಿನ ಮೈತ್ರಿಯಿಂದಾಗಿ ನಾವು 25 ವರ್ಷಗಳನ್ನು ವ್ಯರ್ಥಗೊಳಿಸಿದೆವು. ಬಾಬ್ರಿ ಮಸೀದಿ ಧ್ವಂಸದ ಬಳಿಕ ಉತ್ತರ ಭಾರತದಲ್ಲಿಯೂ ಶಿವಸೇನೆ ಅಲೆ ಬೀಸಲಾರಂಭಿಸಿತ್ತು. ನಾವು ಆಗ ಚುನಾವಣೆಗೆ ಸ್ಪರ್ಧಿಸಿದ್ದರೆ ದೇಶದಲ್ಲಿ ಶಿವಸೇನೆಯ ಪ್ರಧಾನಿಯನ್ನು ನೋಡಬಹುದಾಗಿತ್ತು. ಆದರೆ ಆ ಅವಕಾಶವನ್ನು ನಾವು ಬಿಜೆಪಿಗೆ ಬಿಟ್ಟುಕೊಟ್ಟೆವು’ ಎಂದೂ ರಾವತ್ ಹೇಳಿದ್ದಾರೆ. ಅದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಫಡ್ನವಿಸ್, ‘ಬಿಜೆಪಿ ಜತೆ ಇದ್ದಾಗ ಶಿವಸೇನೆಯು ರಾಜ್ಯದಲ್ಲಿ ನಂ.1 ಅಥವಾ ನಂ.2 ಪಕ್ಷವಾಗಿತ್ತು. ಈಗ ನಂ.4 ಪಕ್ಷವಾಗಿದೆ’ ಎಂದಿದ್ದಾರೆ. ‘ಬಿಜೆಪಿಯನ್ನು ತಳದಿಂದ ಮೇಲಕ್ಕೆ ಎತ್ತಿದ್ದೇ ಶಿವಸೇನೆ’ ಎಂಬ ರಾವತ್ ಹೇಳಿಕೆಗೆ, ‘ಮುಂಬಯಿಯ ಬಿಜೆಪಿಯ ಮೊದಲ ಕಾರ್ಪೊರೇಟರ್ ಆಯ್ಕೆಯಾದಾಗ ಇನ್ನೂ ಶಿವಸೇನೆ ಜನ್ಮ ತಾಳಿರಲೇ ಇಲ್ಲ’ ಎಂದು ಫಡ್ನವಿಸ್ ಪ್ರತಿಕ್ರಿಯಿ ನೀಡಿದ್ದಾರೆ. ಶಿವಸೇನೆ ಮುಖ್ಯಸ್ಥರೂ ಆಗಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಹ ಭಾನುವಾರ ನಡೆದ ಪಕ್ಷದ ಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಜನ್ಮದಿನದ ಸಮಾರಂಭದಲ್ಲಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದರು. ‘ಶಿವಸೇನೆಯು ಬಿಜೆಪಿ ಜತೆಗಿನ ಸಖ್ಯ ಕಡಿದು ಕೊಂಡಿದೆಯೇ ಹೊರತು ಹಿಂದುತ್ವದ ವಿಚಾರಧಾರೆಯನ್ನು ತೊರೆದಿಲ್ಲ. ಬಿಜೆಪಿ ನಮ್ಮ ಬೆನ್ನಿಗೆ ಇರಿಯುವ ಪ್ರಯತ್ನ ಮಾಡಿದ್ದರಿಂದ ಮೈತ್ರಿ ಕಡಿದುಕೊಳ್ಳಬೇಕಾಯಿತು’ ಎಂದು ಠಾಕ್ರೆ ಹೇಳಿದ್ದರು.
from India & World News in Kannada | VK Polls https://ift.tt/3FXP8dW